ಸಿಡಿಲಿಗೆ ಕುರಿಗಾರಿ ಮಹಿಳೆ ಸಾವು

death
rain effect, death
Published on

42 ಕುರಿಗಳು ಬಲಿ

ಜಿಲ್ಲಾಡಳಿತದಿಂದ 5 ಲಕ್ಷ ರೂ.ಪರಿಹಾರ


ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ಹೊಸಕೋಟೆ
ಹೊಸಕೋಟೆ ತಾಲೂಕು ಕಸಬಾ ಹೋಬಳಿಯ ಗಣಗಲು ಗ್ರಾಮದಲ್ಲಿ ಸಿಡಿಲಿಗೆ ಕುರಿಗಾಹಿ ಮಹಿಳೆ ಸಾವನ್ನಪ್ಪಿದ್ದು, 42 ಕುರಿಗಳು ಬಲಿಯಾಗಿವೆ.
ಗಣಗಲು ಗ್ರಾಮದ ರತ್ನಮ್ಮ(55) ಮೃತ ದುರ್ದೈವಿ. ರತ್ನಮ್ಮ ಅವರಿಗೆ ಪತಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮರಣೋತ್ತರ ಪರೀಕ್ಷೆಗೆ ಹೊಸಕೋಟೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಶವ ರವಾನಿಸಲಾಗಿದೆ. ಸ್ಥಳೀಯ ಪಶುಪಾಲನ ಇಲಾಖೆ ವೈದ್ಯಾಧಿಕಾರಿಗಳು ಕುರಿಗಳ ಕಳೆಬರಹ ಪರೀಕ್ಷೆ ನಡೆಸಿದ್ದಾರೆ.
ಬೇವಿನ ಮರದಡಿ ದುರ್ಘಟನೆ: ಕುರಿಗಾಹಿ ಮಹಿಳೆ ರತ್ನಮ್ಮ ಎಂದಿನಂತೆ ಗ್ರಾಮದ ಹೊರವಲಯದಲ್ಲಿ ಕುರಿ ಮೇಯಿಸಲು ತೆರಳಿದ್ದರು. ಮಧ್ಯಾಹ್ನದ ವೇಳೆಗೆ ದಿಢೀರ್ ಮಳೆ ಸುರಿಯಲಾರಂಭಿಸಿದ್ದರಿಂದ ಬೇವಿನ ಮರದಡಿ ಆಶ್ರಯ ಪಡೆದಿದ್ದರು ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ರತ್ನಮ್ಮನ ಸುತ್ತುವರೆದಿದ್ದ ಅಷ್ಟೂ ಕುರಿಗಳು ಸಿಡಿಲಿಗೆ ಬಲಿಯಾಗಿವೆ ಎಂದು ಡಿವೈಎಸ್‌ಪಿ ಪಿ.ಮಲ್ಲೇಶ್ ತಿಳಿಸಿದ್ದಾರೆ.
ಸ್ಥಳಕ್ಕೆ ಅಧಿಕಾರಿಗಳು ದೌಡು: ವಿಷಯ ತಿಳಿಯುತ್ತಿದ್ದಂತೆ ತಹಸೀಲ್ದಾರ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಜಗದೀಶ್, ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿ ತಾಲೂಕು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

5 ಲಕ್ಷ ರೂ.ಪರಿಹಾರ: ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಜಿಲ್ಲಾಡಳಿತದಿಂದ 5 ಲಕ್ಷ ರೂ.ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ತಿಳಿಸಿದ್ದಾರೆ. ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ಆಶ್ರಯ ಪಡೆಯಲು ಹೋಗಿದ್ದ ರತ್ನಮ್ಮ ಸಿಡಿಲಿಗೆ ಬಲಿಯಾಗಿರುವುದು ದುರ್ದೈವ, ಸಿಡಿಲು ಮಿಂಚಿನ ಸಮಯದಲ್ಲಿ ಸಾರ್ವಜನಿಕರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಸಲಹೆ ಹಾಗೂ ಸೂಚನೆಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಕುರಿಗಳಿಗೂ ಪರಿಹಾರ: ಪ್ರಕರಣದಲ್ಲಿ 42 ಕುರಿಗಳು ಮೃತಪಟ್ಟಿರುವ ಬಗ್ಗೆ ಎ್ಐಆರ್‌ನಲ್ಲಿ ದಾಖಲಿಸಲಾಗಿದೆ. ಕುರಿಗಳ ಮರಣೋತ್ತರ ಪರೀಕ್ಷೆ ಬಳಿಕ ಅಂತಿಮ ವರದಿ ಪರಿಶೀಲನೆ ನಡೆಸಿ ಅಷ್ಟೂ ಕುರಿಗಳಿಗೆ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಜಗದೀಶ್ ತಿಳಿಸಿದ್ದಾರೆ. ಸಾಮಾನ್ಯವಾಗಿ 6 ತಿಂಗಳ ಮೇಲ್ಪಟ್ಟ ಎಲ್ಲ ಕುರಿಗಳಿಗೆ ಒಂದೆ ಮಾನದಂಡದ ಆಧಾರದ ಮೇಲೆ ಪರಿಹಾರ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಇಲಾಖೆಯಿಂದ ಎಲ್ಲ ಕ್ರಮ: ಪ್ರಕರಣ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳ ಮಹಜರು ನಡೆಸಿದ್ದು ವರದಿ ಸಲ್ಲಿಸಿದ್ದಾರೆ. ಮೃತ ಮಹಿಳೆ ಸೇರಿ ಸತ್ತ ಕುರಿಗಳ ಬಗ್ಗೆ ಇಲಾಖೆಯ ಮಾರ್ಗಸೂಚಿಯಂತೆ ಎಲ್ಲ ಕ್ರಮ ಕೈಗೊಂಡಿದ್ದು, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಇಲಾಖೆ ಸೂಕ್ತ ವರದಿ ಸಲ್ಲಿಸಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ಸಿಡಿಲಿಗೆ ಮಹಿಳೆ ಬಲಿಯಾಗಿರುವುದು ನಿಜಕ್ಕೂ ದುರ್ದೈವದ ಸಂಗತಿ, ಹೊರಗಡೆ ಚುನಾವಣಾ ಕಾರ್ಯದಲ್ಲಿರುವುದರಿಂದ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಆದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿದ್ದೇನೆ. ಜಿಲ್ಲಾಡಳಿತದಿಂದ ಪರಿಹಾರ ದೊರೆಯಲಿದೆ ವಯಕ್ತಿಕವಾಗಿಯೂ ಅವರ ಕುಟುಂಬಕ್ಕೆ ಸಹಾಯ ಮಾಡಲಿದ್ದೇನೆ.
ಶರತ್‌ಬಚ್ಚೇಗೌಡ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net