ಮಳೆ ಹಾನಿ ಪ್ರದೇಶಗಳ ಸರ್ವೇ ಕಾರ್ಯಕ್ಕೆ ಸೂಚನೆ: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ

Renukacharya
Published on

ಹೊನ್ನಾಳಿ: ಹೊನ್ನಾಳಿ, ನ್ಯಾಮತಿ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ಬೆಳೆಗಳಿಗೆ ಹಾನಿಯಾಗಿದೆ. ಸರ್ವೇ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಇನ್ನೆರಡು ದಿನಗಳಲ್ಲಿ ಸಮಗ್ರ ಮಾಹಿತಿ ಲಭ್ಯವಾಗಲಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ತಾಲೂಕಿನ ದೊಡ್ಡೇರಹಳ್ಳಿ, ಹತ್ತೂರು, ಮಾದೇನಹಳ್ಳಿ ಗ್ರಾಮಗಳ ಬೆಳೆಹಾನಿ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿ ವೀಕ್ಷಿಸಿದ ಸಂದರ್ಭ ಮಾತನಾಡಿದರು.

ಹೊನ್ನಾಳಿ, ನ್ಯಾಮತಿ ತಾಲೂಕಿನ 21 ಸಾವಿರ ಮೆಕ್ಕೆಜೋಳ, 1200 ಹತ್ತಿ, 780 ಶೇಂಗಾ, 100 ತೊಗರಿ, ಒಂದು ಸಾವಿರ ಹೆಕ್ಟೇರ್‌ನಲ್ಲಿ ಇತರ ಬೆಳೆಗಳನ್ನು ಬಿತ್ತನೆ ಮಾಡಲಾಗಿದ್ದು, ಮಳೆಯಿಂದ ಸಂಪೂರ್ಣ ನಷ್ಟ ಸಂಭವಿಸಿದ್ದು, ಜಂಟಿ ಸರ್ವೇ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಅವಳಿ ತಾಲೂಕಿನಲ್ಲಿ 9 ಮನೆಗಳಿಗೆ ತೀವ್ರ, 39 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಬಾಲರಾಜ್‌ಘಾಟ್‌ನಲ್ಲಿ ಕಾಳಜಿ ಕೇಂದ್ರ ತೆರೆದಿದ್ದು, 23 ಕುಟುಂಬಗಳ 111 ಜನರಿಗೆ ವಸತಿ ಕಲ್ಪಿಸಲಾಗಿದೆ. ಮನೆಗಳಿಗೆ ನೀರು ನುಗ್ಗಿದ 13 ಕುಟುಂಬಗಳಿಗೆ ತಲಾ ಹತ್ತು ಸಾವಿರ ರೂ. ಮೌಲ್ಯದ ಚೆಕ್ ವಿತರಿಸಲಾಗಿದೆ. ಇನ್ನೂ ಮೂರು ಕಡೆ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ತುಂಗಭದ್ರಾ ನದಿ ಅಪಾಯಮಟ್ಟ 11 ಮೀಟರ್ ಇದ್ದು, ಪ್ರಸ್ತುತ 10.09 ಮೀಟರ್ ವರೆಗೆ ನೀರು ಸಂಗ್ರಹವಾಗಿದೆ. ಈಗ ನೀರಿನ ಮಟ್ಟ ತಗ್ಗಿದೆಯಾದರೂ ನದಿಪಾತ್ರದ ಜನ ಎಚ್ಚರ ವಹಿಸಬೇಕು ಎಂದರು. ತಹಸೀಲ್ದಾರ್ ರಶ್ಮಿ, ಕೃಷಿ ಅಧಿಕಾರಿ ಪ್ರತಿಮಾ, ಗ್ರಾಪಂ ಅಧ್ಯಕ್ಷ ಕುಬೇರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net