

ಮಡಿಕೇರಿ: ಮಳೆಯಿಂದ ಹಾನಿಯಾದ ಮನೆ ಹಾಗೂ ಇತರೆ ಸಂಬಂಧ ತಕ್ಷಣವೇ ಪರಿಹಾರ ವಿತರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಮಳೆ ಹಾನಿ ಸಂಬಂಧ ಶನಿವಾರ ವೀಡಿಯೋ ಸಂವಾದ ಮೂಲಕ ಜಿಲ್ಲಾಧಿಕಾರಿ ಅವರಿಂದ ಮಾಹಿತಿ ಪಡೆದು ಮಾತನಾಡಿದ ಅವರು, ಕಾಳಜಿ ಕೇಂದ್ರದಲ್ಲಿ ಮೆನು ಪ್ರಕಾರ ಅಹಾರ್ ಪೂರೈಸಬೇಕು. ಸಂತ್ರಸ್ತರು ಕಾಳಜಿ ಕೇಂದ್ರಕ್ಕೆ ಬರದೆ ಸಂಬಂಧಿಕರ ಮನೆಗೆ ಹೋದಲ್ಲಿ ಅವರಿಗೆ ಆಹಾರ ಕಿಟ್ ನೀಡಬೇಕು ಎಂದು ನಿರ್ದೇಶನ ನೀಡಿದರು.
ಮಳೆಯಿಂದ ಹಾನಿಯಾದ ರಸ್ತೆ, ಸೇತುವೆ ದುರಸ್ತಿಗೆ ಮುಂದಾಗಬೇಕು. ಸಾರಿಗೆ ಮತ್ತು ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು. ಭೂಕುಸಿತ ಹೆಚ್ಚಿರುವ ಪ್ರದೇಶದಲ್ಲಿ ಜನರ ಮನವೊಲಿಸಿ ಸ್ಥಳಾಂತರಿಸಬೇಕು. ಹೆಚ್ಚಿನ ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಲ್ಲಿ. ಕೂಡಲೆ ವಿದ್ಯುತ್ ಲೈನ್, ಟ್ರಾನ್ಸಫಾರ್ಮರ್ ಪುನಹ ಸ್ಥಾಪಿಸಬೇಕು ಎಂದು ಒತ್ತಿ ಹೇಳಿದರು.
ಪರಿಹಾರ ಕಲ್ಪಿಸಲು ಹಣದ ಕೊರತೆ ಇಲ್ಲ. ಮಳೆ ಹಾನಿ ಸಂಬಂಧ ಅಯಾಯ ಸಂದರ್ಭದಲ್ಲಿ ಪರಿಹಾರ ವಿತರಿಸಬೇಕು ಎಂದು ಮುಖ್ಯಮಂತ್ರಿ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರು ಮಾಹಿತಿ ನೀಡಿ, ಮನೆ ಹಾನಿಗೆ ತಕ್ಷಣವೇ ಪರಿಹಾರ ವಿತರಿಸಲಾಗುತ್ತಿದೆ. ಭಾಗಮಂಡಲ-ಕರಿಕೆ ರಸ್ತೆ ಮಾರ್ಗದಲ್ಲಿ ಅಲ್ಲಲ್ಲಿ ಬರೆ ಕುಸಿತ ಉಂಟಾಗಿದ್ದು, ತೆರವುಗೊಳಿಲಾಗಿದೆ. ಹಾಗೆಯೇ ಜಿಲ್ಲೆಯ ಕೆಲವು ಕಡೆ ರಸ್ತೆ ಮತ್ತು ಸೇತುವೆ ಹಾನಿ ಆಗಿದ್ದು ಸರಿಪಡಿಸುವ ಕಾರ್ಯ ನಡೆದಿದೆ. ತೊಂದರೆಗೆ ಒಳಗಾದ ಕುಟುಂಬದವರಿಗೆ ಆಹಾರ ಕಿಟ್ ಒದಗಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.