

ಉಡುಪಿ: ಕೇಂದ್ರ ಮಳೆಹಾನಿ ಅಧ್ಯಯನ ತಂಡದ ಮುಖ್ಯಸ್ಥ ಹಾಗೂ ಕೇಂದ್ರ ಗೃಹ ಸಚಿವಾಲಯ ಜಂಟಿ ಕಾರ್ಯದರ್ಶಿ ಆಶೀಶ್ ಕುಮಾರ್ ನೇತೃತ್ವದ ಕೇಂದ್ರ ತಂಡ ಗುರುವಾರ ಉಡುಪಿ ಜಿಲ್ಲೆಯಲ್ಲಿ ಮಳೆಹಾನಿ ಪರಿಸ್ಥಿತಿಯ ಅಧ್ಯಯನಕ್ಕೆ ಆಗಮಿಸಿದ್ದು, ನಗರದ ತಾಲೂಕು ಕಚೇರಿಯಲ್ಲಿ ಜಿಲ್ಲಾಡಳಿತದಿಂದ ಮಳೆ ನಷ್ಟ ಕುರಿತ ಅಂಕಿ ಅಂಶಗಳ ವಿವರಗಳನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಆಶೀಶ್ ಕುಮಾರ್, ಜಿಲ್ಲೆಯಲ್ಲಿ ಪ್ರತಿಯೊಂದು ಬೆಳೆಗಳು, ಮೀನುಗಾರಿಕಾ ಬೋಟ್‌ಗಳನ್ನು ವಿಮಾ ವ್ಯಾಪ್ತಿಗೆ ತರಲು ಪ್ರೋತ್ಸಾಹಿಸಬೇಕು. ಇದರಿಂದ ವೈಯಕ್ತಿಕ ನಷ್ಟದ ಪ್ರಮಾಣ ಕಡಿಮೆಯಾಗುತ್ತದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಸೇರಿದಂತೆ ಮತ್ತಿತರ ಬೆಳೆ ವಿಮೆಗೆ ಸರ್ಕಾರ ಪ್ರೀಮಿಯಂ ಹಣವನ್ನು ಶೇ.98 ರಷ್ಟು ತುಂಬುತ್ತಿದ್ದು, ಬಾಕಿ ಉಳಿದ ಶೇ. 2 ರಷ್ಟು ಹಣವನ್ನು ರೈತರು ಪಾವತಿಸಬೇಕು. ಇದರಿಂದ ರೈತರು ತಮಗಾದ ಬೆಳೆ ನಷ್ಟ ಪರಿಹಾರವನ್ನು ಶೀಘ್ರದಲ್ಲಿ ಪಡೆಯಬಹುದು. ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಮಾತನಾಡಿ, ಜಿಲ್ಲಾಡಳಿತವು ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಯನ್ನು ರಾಜ್ಯದಲ್ಲಿಯೇ ಉತ್ತಮ ರೀತಿಯಲ್ಲಿ ರೂಪಿಸಿದೆ. 300ಕ್ಕೂ ಹೆಚ್ಚು ಆಪದ್ ಮಿತ್ರ ಸ್ವಯಂ ಸೇವಕರಿಗೆ ಹಾಗೂ 180 ಕ್ಕೂ ಹೆಚ್ಚು ನೆಹರು ಯುವಕೇಂದ್ರದ ಸ್ವಯಂ ಸೇವಕರಿಗೆ ತರಬೇತಿ ನೀಡಲಾಗಿದೆ. ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಮೊಬೈಲ್ ಆಪ್ ಹಾಗೂ ವೆಬ್‌ಸೈಟ್ ಬಳಸಿ ಬೆಳೆ ಹಾನಿ ಸಮೀಕ್ಷೆ ಮಾಡಿ ನಿಖರ ವರದಿಯನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ನೀಡಿದ್ದಾರೆ ಎಂದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ಮಾತನಾಡಿ, ಕಳೆದ ಮಾರ್ಚ್‌ನಿಂದ ಈವರೆಗೆ ಜಿಲ್ಲೆಯಲ್ಲಿ 2 ಜನ ಮೃತಪಟ್ಟು, 65 ಮನೆಗಳಿಗೆ ಪೂರ್ಣ ಪ್ರಮಾಣದಲ್ಲಿ, 424 ಭಾಗಶಃ ಹಾನಿಯಾಗಿದೆ. 1239.73 ಹೆಕ್ಟೇರ್ ನಷ್ಟು ಬೆಳೆಹಾನಿ ಉಂಟಾಗಿದೆ. 41.8 ಕಿ.ಮೀ ರಾಷ್ಟ್ರೀಯ ಹೆದ್ದಾರಿ, 56.98 ಕಿ.ಮೀ ಜಿಲ್ಲಾ ರಸ್ತೆ, 194 ಕಿ.ಮೀ ನಗರ ಪ್ರದೇಶ ರಸ್ತೆ, 1379.95 ಕಿ.ಮೀ ಗ್ರಾಮೀಣ ರಸ್ತೆ ಹಾಳಾಗಿದೆ. 120 ಕ್ಕೂ ಹೆಚ್ಚು ಸೇತುವೆಗಳು, 1699 ವಿದ್ಯುತ್ ಕಂಬಗಳು ಬಿದ್ದಿವೆ. 335 ಟ್ರಾನ್ಸ್‌ಫಾರಂ ಹಾಳಾಗಿವೆ. 235 ಶಾಲಾ ಕಟ್ಟಡಗಳು, 78 ಮೀನುಗಾರಿಕಾ ದೋಣಿ, 90ಕ್ಕೂ ಹೆಚ್ಚು ಮೀನು ಬಲೆಗಳು ಹಾನಿಯಾಗಿವೆ. ಅಂದಾಜು 263.91 ಕೋಟಿ ರೂ. ನಷ್ಟ ಉಂಟಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚೀಂದ್ರ, ಕೇಂದ್ರ ಹಣಕಾಸು ಇಲಾಖೆಯ ಉಪ ನಿರ್ದೇಶಕ ಮಹೇಶ್ ಕುಮಾರ್, ಕೇಂದ್ರ ಇಂಧನ ಇಲಾಖೆಯ ಸಹಾಯಕ ನಿರ್ದೇಶಕಿ ಭವ್ಯಾ ಪಾಂಡೆ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಉಪಸ್ಥಿತರಿದ್ದರು. ಸಭೆಯ ನಂತರ ಕೇಂದ್ರ ತಂಡವು ಮಳೆಯಿಂದ ಹಾನಿಗೀಡಾದ ಮರವಂತೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.