

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಹೆಂಚು ತುಂಡಾಗಿ ನೀರು ಸೋರಿ ಜಲಾವೃತವಾಗಿದ್ದ ಮನೆಯಲ್ಲಿ ವಾಸವಾಗಿದ್ದ ಕೊರಗ ಕುಟುಂಬವೊಂದಕ್ಕೆ ಪಂಚಾಯಿತಿ ಕಟ್ಟಡದಲ್ಲಿ ಪ್ರತ್ಯೇಕ ವಾಸಕ್ಕೆ ಅನುವು ಮಾಡಿಕೊಟ್ಟ ದರೆಗುಡ್ಡೆ ಗ್ರಾಪಂ ಆಡಳಿತದ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಕೆಲ್ಲಪುತ್ತಿಗೆ ಕೆಂಪುಗುಡ್ಡೆ ಕಾಲನಿಯ ವಸಂತ, ಅವರ ಸಹೋದರಿ ಶಾಂಭವಿ ಹಾಗೂ ಶಾಲೆಗೆ ಹೋಗುವ ಮಕ್ಕಳ ಸಹಿತ ಕುಟುಂಬ ಹಳೇ ಕಾಲದ ಹೆಂಚಿನ ಮನೆಯಲ್ಲಿ ವಾಸವಾಗಿತ್ತು. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಮನೆಯ ಕೆಲವು ಹೆಂಚು ನಾಶವಾಗಿ ಮಳೆ ನೀರು ಒಳಸುರಿದು ಜಲಾವೃತವಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಪಂಚಾಯಿತಿ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಅಭಿವೃದ್ಧಿ ಅಧಿಕಾರಿ ರಾಜು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕುಟುಂಬವನ್ನು ಅಪಾಯದಿಂದ ರಕ್ಷಿಸಿ ಪಂಚಾಯಿತಿ ಆಡಳಿತ ಕಚೇರಿ ಬಳಿಯಿರುವ ಸೇವಾ ಕೇಂದ್ರದ ಕಟ್ಟಡದಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಟ್ಟರು.
ಘಟನಾ ಸ್ಥಳಕ್ಕೆ ತಾಪಂ ಕಾರ್ಯನಿರ್ವಹಣಾಧಿಕಾರಿ ಭೇಟಿ ನೀಡಿ ದೂರದ ಇರ್ವತ್ತೂರು ಬಗಲ್ತಕಟ್ಟೆ ಶಾಲೆಗೆ ಹೋಗುತ್ತಿದ್ದ ಕುಟುಂಬದ ಮಕ್ಕಳಿಗೆ ಸ್ಥಳೀಯ ದರೆಗುಡ್ಡೆ ಶಾಲೆಯಲ್ಲಿ ವಿದ್ಯಾಭ್ಯಾಸ ಒದಗಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ವ್ಯವಸ್ಥೆ ಕಲ್ಪಿಸಿದ್ದಾರೆ.
ಮಾಡಿನ ಹೆಂಚು ನಾಶವಾದ ಜಾಗಕ್ಕೆ ಪಂಚಾಯಿತಿ ವತಿಯಿಂದ ಪ್ಲಾಸ್ಟಿಕ್ ಅಳವಡಿಸಿ ಮನೆಯ ಸುರಕ್ಷತೆ ದೃಷ್ಟಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮಳೆಗಾಲ ಮುಗಿದ ಕೂಡಲೇ ಪಂಚಾಯಿತಿ ಅನುದಾನ ಬಳಸಿ ಕುಟುಂಬಕ್ಕೆ ಪ್ರತ್ಯೇಕ ಮನೆ ನಿರ್ಮಿಸಿಕೊಡಲಾಗುತ್ತದೆ. ಅಶೋಕ್ ಶೆಟ್ಟಿ ಬೇಲೊಟ್ಟು, ಅಧ್ಯಕ್ಷರು, ದರೆಗುಡ್ಡೆ ಗ್ರಾಮ ಪಂಚಾಯಿತಿ https://www.vijayavani.net/rain-damage-7 https://www.vijayavani.net/rain-damage-8