ಮರ ಉರುಳಿ ವಿದ್ಯುತ್ ಕಂಬಗಳಿಗೆ ಹಾನಿ : ಕೈಕಾರ-ಕಾಫಿಕಾಡು ರಸ್ತೆ ಸಂಚಾರಕ್ಕೆ ಅಡಚಣೆ

pole
ಮೊಡಪ್ಪಾಡಿಮೂಲೆಯಲ್ಲಿ ಮರ ಉರುಳಿ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿ, ವಾಹನ ಸಂಚಾರಕ್ಕೆ ಅಡಚಣೆಯಾಯಿತು.
Published on

ಪುತ್ತೂರು ಗ್ರಾಮಾಂತರ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮರವೊಂದು ಉರುಳಿ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾದ ಮತ್ತು ವಾಹನ ಸಂಚಾರಕ್ಕೆ ಅಡಚಣೆಯಾದ ಘಟನೆ ಒಳಮೊಗ್ರು ಗ್ರಾಮದ ಕೈಕಾರ-ಕಾಪಿಕಾಡು-ದೇವಸ್ಯ ರಸ್ತೆಯ ಮೊಡಪ್ಪಾಡಿಮೂಲೆ ಎಂಬಲ್ಲಿ ನಡೆದಿದೆ.

ಪುತ್ತೂರು-ಸಂಟ್ಯಾರು-ಪಾಣಾಜೆ ರಸ್ತೆಯ ಕೈಕಾರದಿಂದ ಕಾಪಿಕಾಡು ಮೂಲಕವಾಗಿ ಪುತ್ತೂರು-ಪರ್ಲಡ್ಕ-ಕುಂಜೂರುಪಂಜ -ಪಾಣಾಜೆ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೊಡಪ್ಪಾಡಿಮೂಲೆ ಎಂಬಲ್ಲಿ ಮರ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಲೈನಿನ ಮೇಲೆ ಉರುಳಿಬಿದ್ದಿದೆ. ಇದರಿಂದಾಗಿ ಎರಡು ವಿದ್ಯುತ್ ಕಂಬಗಳು ಮುರಿದು ರಸ್ತೆಗೆ ಅಡ್ಡವಾಗಿ ಬಿದ್ದಿದ್ದು, ವಿದ್ಯುತ್ ತಂತಿಗಳು ರಸ್ತೆಯ ಮೇಲೆಯೇ ಹರಡಿಕೊಂಡಿದ್ದವು.

ಪುತ್ತೂರು-ಪರ್ಲಡ್ಕ-ಕುಂಜೂರು ಪಂಜ ರಸ್ತೆಯ ಚೆಲ್ಯಡ್ಕದಲ್ಲಿರುವ ಸೇತುವೆಯ ಮೇಲೆ ಘನ ವಾಹನಗಳ ಸಂಚಾರ ನಿಷೇಧಿಸಿರುವುದರಿಂದ ದೇವಸ್ಯ ಕಡೆಯಿಂದ ಇರ್ದೆ ಬೆಟ್ಟಂಪಾಡಿ-ಪಾಣಾಜೆ ಕಡೆಗೆ ಸಂಚರಿಸುವ ವಾಹನಗಳು ಕಾಪಿಕಾಡು-ಕೈಕಾರ ರಸ್ತೆಯ ಮೂಲಕ ಸಂಚರಿಸುತ್ತಿದ್ದವು. ರಸ್ತೆಗೆ ಮರ ಮತ್ತು ವಿದ್ಯುತ್ ಕಂಬಗಳು ಉರುಳಿಬಿದ್ದ ಪರಿಣಾಮವಾಗಿ ಈ ಸಂಪರ್ಕ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಮೆಸ್ಕಾಂ ಇಲಾಖೆಯ ಪವರ್‌ಮನ್‌ಗಳು ಸ್ಥಳಕ್ಕೆ ಬಂದು ಉರುಳಿಬಿದ್ದ ವಿದ್ಯುತ್ ಕಂಬಗಳನ್ನು ಸ್ಥಳೀಯರ ಸಹಕಾರದೊಂದಿಗೆ ತೆರವುಗೊಳಿಸಿದರು.

ಹದಗೆಟ್ಟ ಮಾರ್ಗ

ಚೆಲ್ಯಡ್ಕ ಸೇತುವೆ ಮೇಲೆ ಘನವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಬದಲಿ ರಸ್ತೆಯಾಗಿ ದೇವಸ್ಯ-ಕಾಪಿಕಾಡು-ಕೈಕಾರ ರಸ್ತೆಯನ್ನು ಸೂಚಿಸಲಾಗಿತ್ತು. ಈ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಹಲವು ಕಡೆಗಳಲ್ಲಿ ಅಪಾಯಕಾರಿ ಸ್ಥಿತಿಗಳಿವೆ. ಹಾಗಾಗಿ ಶಾಲಾ ಕಾಲೇಜು ಮಕ್ಕಳನ್ನು ಕರೆದೊಯ್ಯುವ ಸ್ಕೂಲ್ ಬಸ್‌ಗಳು ಹಾಗೂ ಖಾಸಗಿ ಬಸ್‌ಗಳ ಸಹಿತ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿರುವುದರಿಂದ ಈ ಭಾಗದ ಶಾಲಾ ಕಾಲೇಜು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net