ಕೊಡಗಿನಲ್ಲಿ ಮತ್ತೆ ರೆಡ್ ಅಲರ್ಟ್

rain damage
Published on

ಮಡಿಕೇರಿ:

ಕೊಡಗಿನ ಹಲವಡೆ ಆರಿದ್ರಾ ಮಳೆಯ ಬಿರುಸು ಗುರುವಾರವೂ ಕಂಡು ಬಂತು. ಭಾರತೀಯ ಹವಾಮಾನ ಇಲಾಖೆ ಶುಕ್ರವಾರವೂ ಬೆಳಗ್ಗೆ 8.30ರ ತನಕ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ದಿನಪೂರ್ತಿ ಮಳೆ ಇತ್ತು. ಮಡಿಕೇರಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಮಳೆಯ ವಾತಾವರಣ ಮುಂದುವರಿದಿತ್ತು. ಭಾಗಮಂಡಲ, ತಲಕಾವೇರಿ, ನಾಪೋಕ್ಲು, ವಿರಾಜಪೇಟೆ, ಕಕ್ಕಬ್ಬೆ, ಗೋಣಿಕೊಪ್ಪಲು, ಪೊನ್ನಂಪೇಟೆ, ಬಿರುನಾಣಿ ಸೇರಿದಂತೆ ಹೆಚ್ಚಿನ ಭಾಗದಲ್ಲಿ ಭಾರಿ ಮಳೆ ಆಗಿದೆ.

ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಬೆಳಗ್ಗೆ ಬಿಸಿಲು ಇತ್ತಾದರೂ ಆಗಾಗ್ಗೆ ಮಳೆಯ ದರ್ಶನ ಆಗುತ್ತಿತ್ತು. ಸೋಮವಾರಪೇಟೆ ತಾಲೂಕಿನ ಹೆಚ್ಚಿನ ಭಾಗದಲ್ಲಿ ಮಳೆ ಮುಂದುವರಿದಿತ್ತು. ಕಳೆದ 2 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸೋಮವಾರಪೇಟೆ ಕುವೆಂಪು ಶಾಲೆ ಕಟ್ಟಡದ ಮುಂಭಾಗದ ತಡೆಗೋಡೆಯ ಸ್ವಲ್ಪ ಭಾಗ ಕುಸಿದಿದೆ. ಅರಪಟ್ಟು ಗ್ರಾಮದ ಜುನೈದ್ ಅವರ ವಾಸದ ಮನೆ ಪಕ್ಕದಲ್ಲಿ ಬರೆ ಜರಿದು ಮನೆಯ ಹಿಂಭಾಗದಲ್ಲಿ ಮಣ್ಣು ಕುಸಿದಿದೆ. ಕಿರುಂದಾಡು ಗ್ರಾಮದ ದೇವಜನ ಪುಷ್ಪವೇಣಿ ಎಂಬವರ ವಾಸದ ಮನೆಯ ಒಂದು ಭಾಗದ ಗೋಡೆ ಪೂರ್ಣವಾಗಿ ಹಾನಿಗೆ ಒಳಗಾಗಿದೆ. ಎಮ್ಮೆಮಾಡು ಗ್ರಾಮದ ಕದಿಸಮ್ಮ ಎಂಬವರ ವಾಸದ ಮನೆಯ ಅಡುಗೆ ಮನೆಯ ಒಂದು ಭಾಗದ ಗೋಡೆ ಬಿದ್ದು ಹಾನಿಯಾಗಿದೆ. ಮನೆಯ ಗೋಡೆ ಬಿರುಕು ಬಿಟ್ಟಿದೆ.

ವಿರಾಜಪೇಟೆ ಹೋಬಳಿ ದೇವಣಗೇರಿ ಗ್ರಾಮದ ಹೆಚ್. ಹರೀಶ ಎಂಬವರ ವಾಸದ ಮನೆ ಮಳೆಯಿಂದಾಗಿ ಕುಸಿದಿದ್ದು, ಪೂರ್ಣ ಪ್ರಮಾಣದಲ್ಲಿ ಕುಸಿಯುವ ಹಂತದಲ್ಲಿದೆ. ಇವರನ್ನು ಪಕ್ಕದ ಮನೆಗೆ ಸ್ಥಳಾಂತರಿಸಿ ಆಹಾರ ಕಿಟ್ ವಿತರಿಸಲಾಗಿದೆ.

ಅಮ್ಮತ್ತಿ ಹೋಬಳಿ ಕರಡಿಗೋಡು ಗ್ರಾಮದ ಹೊಳೆಕೆರೆ ರಸ್ತೆ ಕಾವೇರಿ ನದಿ ಪ್ರವಾಹದಿಂದ ಸಂಪರ್ಕ ಕಡಿತಗೊಂಡಿದೆ. ರಸ್ತೆಯಲ್ಲಿ ಅಂದಾಜು 4 ಅಡಿ ನೀರು ನಿಂತಿದೆ. ಈ ಭಾಗದಲ್ಲಿ ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪೊನ್ನಂಪೇಟೆ ತಾಲೂಕು ಶೆಟ್ಟಿಗೇರಿ ಮತ್ತು ಹೈಸೂಡ್ಲೂರು ಮಧ್ಯೆ ರಸ್ತೆ ಮೇಲೆ ಮರ ಬಿದ್ದು ಸಂಚಾರ ವ್ಯತ್ಯಯ ಉಂಟಾಗಿತ್ತು. ಪೊನ್ನಂಪೇಟೆ ಹೋಬಳಿಯ ಕಾನೂರು ಗ್ರಾಮದ ರಸ್ತೆ ಮಳೆಯಿಂದಾಗಿ ಜಲಾವೃತಗೊಂಡಿದ್ದು, ಈ ಗ್ರಾಮಕ್ಕೆ ಬದಲಿ ರಸ್ತೆ ಮೂಲಕ ಸಂಪರ್ಕ ಕಲ್ಪಿಸಲಾಯಿತು. ಭಾಗಮಂಡಲ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತವಾಗಿದೆ.

ಕಳೆದ 24 ಗಂಟೆ ಅವಧಿಯಲ್ಲಿ ಕೊಡಗಿನಲ್ಲಿ ಸರಾಸರಿ 92.55 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 62.63 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1327.46 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 644.95 ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ 79 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 130.10 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 141.29 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 98.45 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 13.90 ಮಿ.ಮೀ. ಸರಾಸರಿ ಮಳೆಯಾಗಿದೆ.

ಪೊನ್ನಂಪೇಟೆ ಹುದಿಕೇರಿ ಹೋಬಳಿಯಲ್ಲಿ ಅತೀ ಹೆಚ್ಚು ಅಂದರೆ 226.70 ಮಿಮೀ ಮಳೆ ದಾಖಲಾಗಿದೆ. ಉಳಿದಂತೆ ಮಡಿಕೇರಿ ಕಸಬಾ 36, ನಾಪೋಕ್ಲು 156.60, ಸಂಪಾಜೆ 34, ಭಾಗಮಂಡಲ 89.40, ವಿರಾಜಪೇಟೆ 149.20, ಅಮ್ಮತ್ತಿ 111, ಶ್ರೀಮಂಗಲ 217.40, ಪೊನ್ನಂಪೇಟೆ 70, ಬಾಳೆಲೆ 51.07, ಸೋಮವಾರಪೇಟೆ 80.80, ಶನಿವಾರಸಂತೆ 68, ಶಾಂತಳ್ಳಿ 172, ಕೊಡ್ಲಿಪೇಟೆ 73, ಕುಶಾಲನಗರ 4.60 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 23.20 ಮಿ.ಮೀ. ಮಳೆಯಾಗಿದೆ.

2859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ ಗುರುವಾರದ ಮಾಹಿತಿ ಪ್ರಕಾರ 2851 ಅಡಿ ನೀರಿದೆ. 7689 ಕ್ಯೂಸೆಕ್ ನೀರಿನ ಒಳಹರಿವು ಇದ್ದು, 8541 ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ.

ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದಂತೆಯೇ ಎನ್‌ಡಿಆರ್‌ಎಫ್ ಸಹಾಯಕ ಕಮಾಂಡೆAಟ್ ಕಿರಣ್ ಕುಮಾರ್ ಕೊಡಗಿಗೆ ಭೇಟಿ ನೀಡಿದ್ದರು.್ಲ ಈಗಾಗಲೇ ಕೊಡಗಿನಲ್ಲಿ ನಿಯೋಜನೆಗೊಂಡಿರುವ ಎನ್‌ಡಿಆರ್‌ಎಫ್ ತಂಡದ ಸಿದ್ಧತೆಯನ್ನು ಪರಿಶೀಲಿಸಿದರು. ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಆರ್. ಎಂ. ಅನನ್ಯ ವಾಸುದೇವ ಅವರೊಡನೆ ಸಮಾಲೋಚನೆ ನಡೆಸಿ ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net