

ಪುತ್ತೂರು ಗ್ರಾಮಾಂತರ: ಕಳೆದ ಕೆಲ ದಿನಗಳಿಂದ ಎಡಬಿಡದೆ ಸುರಿದ ವಿಪರೀತ ಮಳೆಯಿಂದಾಗಿ ಕೆಯ್ಯೂರು ಗ್ರಾಮದ ವಿವಿಧ ಕಡೆಗಳಲ್ಲಿ ಧರೆ ಕುಸಿದು ಮನೆಗೆ ಹಾನಿಯಾಗಿದೆ.
ಧರೆ ಕುಸಿತದಿಂದಾಗಿ ಕೆಯ್ಯೂರು ಗ್ರಾಮದ ಎರಕ್ಕಳ ಗಣೇಶ್ ನಿಡ್ವಣ್ಣಾಯ, ಸಣಂಗಳ ನಿವಾಸಿ ಗೋವಿಂದ ನಾಯ್ಕ, ಎರಕ್ಕಳ ನಿವಾಸಿ ಬೆಳಿಯಪ್ಪ ಗೌಡ ಎಂಬುವರ ಮನೆಗಳಿಗೆ ಹಾನಿಯಾಗಿದೆ. ಎರಕ್ಕಳ ನಿವಾಸಿ ಜಯಂತಿ ಗೌಡ ಎಂಬವರ ಮನೆಯಂಗಳಕ್ಕೆ ನೀರು ನುಗ್ಗಿ ಹಾನಿಯಾಗಿದ್ದು, ಅವರ ಕುಟುಂಬದ ವಾಸ್ತವ್ಯವನ್ನು ಬೇರೆ ಕಡೆಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.
ಕೆಯ್ಯೂರು ಗ್ರಾಮದ ಪಾತುಂಜ ನಿವಾಸಿ ಅಬ್ದುಲ್ ಖಾದರ್ ಎಂಬುವರ ಹಳೆಯದಾದ ಹೆಂಚಿನ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಮಾಡಿನ ಹೆಂಚು, ಪಕ್ಕಾಸು, ರೀಪುಗಳು ಹಾನಿಗೊಂಡಿವೆ. ಮನೆ ಅಪಾಯಕಾರಿ ಸ್ಥಿತಿಗೆ ತಲುಪಿದ್ದ ಹಿನ್ನೆಲೆಯಲ್ಲಿ ಅಬ್ದುಲ್ ಖಾದರ್ ಅವರ ಕುಟುಂಬ ಈ ಮನೆಯಲ್ಲಿ ವಾಸ್ತವ್ಯ ಇರಲಿಲ್ಲ. ಇದರಿಂದಾಗಿ ಸಂಭವಿಸಬಹುದಾಗಿದ್ದ ಅನಾಹುತವೊಂದು ತಪ್ಪಿದೆ.
ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್‌ಕುಮಾರ್ ಮಾಡಾವು, ಪಿಡಿಒ ನಮಿತಾ ಎ.ಕೆ., ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಗ್ರಾಪಂ ಸದಸ್ಯರಾದ ಅಬ್ದುಲ್ ಖಾದರ್ ಮೇರ್ಲ, ವಿಜಯಕುಮಾರ್, ಸುಭಾಷಿಣಿ, ಗ್ರಾಮ ಸಹಾಯಕ ನಾರಾಯಣ ಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.