ಉಳ್ಳಾಲ: ಕುಂಭದ್ರೋಣ ಮಳೆಯಿಂದಾಗಿ ಉಳ್ಳಾಲದ ಮಂಜನಾಡಿಯಲ್ಲಿ ಮೂವರು ಮಕ್ಕಳ ಸಹಿ ನಾಲ್ವರು ಪ್ರಾಣ ಕಳೆದುಕೊಂಡಿದ್ದು, ಅಲ್ಲಲ್ಲಿ ಭಾರಿ ಅನಾಹುತ ಸೃಷ್ಟಿಯಾಗಿದೆ.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲ ಪರಿಸರದಲ್ಲಿ ರಾಜಕಾಲುವೆ ಉಕ್ಕಿ ಹರಿದು 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟವುಂಟಾಗಿದೆ. 15ಕ್ಕಿಂತಲೂ ಹೆಚ್ಚಿನ ಮನೆಗಳ ಆವರಣ ಗೋಡೆ ಕುಸಿದುಬಿದ್ದಿದೆ. ನೀರಿನ ರಭಸಕ್ಕೆ ಒಂದು ಮನೆಯ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಎರಡು ಕಾರುಗಳು ರಸ್ತೆಗೆ ಬಂದು ನಿಂತಿದೆ.
ಉಳ್ಳಾಲ ನಗರಸಭಾ ವ್ಯಾಪ್ತಿಯ ಅಲೇಕಲ ಮದನಿ ಶಿಕ್ಷಣ ಸಂಸ್ಥೆಗೆ ಕೃತಕ ನೆರೆಯಿಂದ ನೀರು ನುಗ್ಗಿ ಅಪಾರ ನಷ್ಟವಾಗಿದೆ. ಶಾಲಾ ಪ್ರಾರಂಭೋತ್ಸವ ಪ್ರಯುಕ್ತ ಪಠ್ಯ ಪುಸ್ತಕ, ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ನೀಡಲು ತಂದಿಡಲಾಗಿದ್ದು ಮಳೆಗೆ ಹಾನಿಯಾಗಿದೆ. ಶಾಲೆಯ ಕಂಪ್ಯೂಟರ್, ಇನ್ವರ್ಟರ್‌ಗೂ ನೀರು ನುಗ್ಗಿ ಹಾನಿಯಾಗಿದೆ.
ಉಚ್ಚಿಲಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತರಗತಿಗಳಿಗೆ ನೀರು ನುಗ್ಗಿದ ಪರಿಣಾಮ ಶಾಲಾ ಪುಸ್ತಕ, ಬಿಸಿಯೂಟದ ಸಾಮಗ್ರಿ, ಮೊಟ್ಟೆ ಮೊದಲಾದ ಸಾಮಗ್ರಿಗಳು ಹಾನಿಯಾಗಿದೆ.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಅಂಬಿಕಾ ನಗರದಲ್ಲಿ ಸಂದೀಪ್ ಎಂಬುವರ ಮನೆಯ ಆವರಣಗೋಡೆ ಕುಸಿದಿದ್ದು ನೂತನ ಮನೆ ಅಪಾಯದಲ್ಲಿದೆ. ತೊಕ್ಕೊಟ್ಟಿನಲ್ಲಿ ರೈಲ್ವೆ ಸ್ಟೇಷನ್ ಬಳಿ ರೈಲು ಹಳಿಯ ಅಡಿಭಾಗದಲ್ಲಿ ಮಣ್ಣು ಕುಸಿದಿದ್ದು ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.