ಮಳೆ ತಂದ ಆವಾಂತರ : ನೆಲ್ಯಾಡಿಯಲ್ಲಿ ಹೆದ್ದಾರಿ ವಿಸ್ತರಣೆ ಕಾರ್ಯ ಸ್ಥಗಿತದಿಂದ ಜನತೆ ಪರದಾಟ

Published on

ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ

ಬೆಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್‌ನಿಂದ ಅಡ್ಡಹೊಳೆ ರಸ್ತೆಯ ಚತುಷ್ಪಥ ಕಾಮಗಾರಿ ಇನ್ನೇನು ಮುಗಿಯುವ ಹಂತಕ್ಕೆ ತಲುಪಿದೆ. ಆದರೆ ನೆಲ್ಯಾಡಿಪೇಟೆಯಲ್ಲಿ ಕಾಮಗಾರಿ ವಿಳಂಬಗೊಂಡು ಇದೀಗ ಮುಂಗಾರು ಪೂರ್ವ ಮಳೆಯಿಂದಾಗಿ ಕಾಮಗಾರಿ ಸ್ಥಗಿತಗೊಂಡಿದ್ದು, ಜನರು ಪರದಾಡುವಂತಾಗಿದೆ.

ಸ್ಥಳೀಯರು ಕಲ್ಲಡ್ಕ ಮಾದರಿ ಫ್ಲೈ ಓವರ್ ನಿರ್ಮಿಸುವಂತೆ ಹಲವು ಸಮಯಗಳಿಂದ ಸಂಸದರ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಸಂಸದರ ಮಧ್ಯಪ್ರವೇಶದಿಂದ ಫ್ಲೈಓವರ್ ಅಡಿಯಲ್ಲಿ ಎರಡು ಅಂಡರ್ ಪಾಸ್‌ಗಳ ಮಧ್ಯದಲ್ಲಿ ಹೆಚ್ಚುವರಿ 3 ಅಂಡರ್ ಪಾಸ್‌ಗಳಂತೆ ಒಟ್ಟು 5 ಅಂಡರ್ ಪಾಸ್‌ಗಳ ಕಾಮಗಾರಿಗೆ ಚಾಲನೆ ದೊರಕಿದೆ. ಇವೆಲ್ಲದರ ನಡುವೆ ಈ ಬಾರಿಯ ಮುಂಗಾರು ಪೂರ್ವ ಮಳೆಯಿಂದಾಗಿ ನೆಲ್ಯಾಡಿಯ ಪೇಟೆ ಭಾಗದ ಸಂಚಾರ ಇನ್ನೂ ಮೂರು ನಾಲ್ಕು ತಿಂಗಳು ಜಟಿಲವಾಗಲಿದೆ.

ಹೆದ್ದಾರಿಯ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೆಲ್ಯಾಡಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವ ಕಾರಣ ಹೆದ್ದಾರಿ ಇಲಾಖೆ ಅಂಡರ್ ಪಾಸ್ ನಿರ್ಮಿಸಲು ನಿರ್ಧರಿಸಿತ್ತು. ಈ ನಡುವೆ ಅಂಡರ್‌ಪಾಸ್ ನಿರ್ಮಿಸಿದಲ್ಲಿ ಬೆಳೆಯುತ್ತಿರುವ ನೆಲ್ಯಾಡಿ ಪೇಟೆಯ ಅಭಿವೃದ್ಧಿ ಕುಂಠಿತವಾಗಲಿದೆ ಎನ್ನುವ ಅಭಿಪ್ರಾಯವನ್ನು ನೆಲ್ಯಾಡಿಯ ವರ್ತಕ ಸಂಘ ಇಲಾಖೆ ಮತ್ತು ಕಾಮಗಾರಿ ಕೈಗೆತ್ತಿಕೊಂಡಿದ್ದ ಕಂಪನಿ ಮುಂದಿಟ್ಟಿತ್ತು. ಈ ವಿಚಾರವನ್ನು ಅಂದಿನ ಸಂಸದರ ಗಮನಕ್ಕೂ ತಂದು ಸಂಸದರು ಫ್ಲೈ ಓವರ್ ಮಾಡಲು 110 ಕೋಟಿ ರೂ. ಮತ್ತು 44 ಕೋಟಿ ರೂ.ಗಳ ಪ್ರತ್ಯೇಕ 2 ಪ್ಲಾೃನ್ ಸಿದ್ಧಪಡಿಸಲು ಇಲಾಖೆಗೆ ಸೂಚಿಸಿದ್ದರು. ಆದರೆ ಸಮರ್ಪಕ ನಿಧಿ ಹೊಂದಿಸಲು ಸಾಧ್ಯವಾಗದೆ ಈ ಯೋಜನೆ ಕೈ ಬಿಡಲಾಯಿತು. ಬಳಿಕ ಈಗಿನ ಸಂಸದರ ಮುಖೇನ 19 ಕೋಟಿ ರೂ.ಗಳ ಮತ್ತೊಂದು ಯೋಜನೆ ಸಿದ್ಧಪಡಿಸಿ ಇಲಾಖೆಗೆ ಸಲ್ಲಿಸಲಾಯಿತು. ಸಮರ್ಪಕ ನಿಧಿ ಇಲ್ಲ ಎಂಬ ಕಾರಣಕ್ಕೆ ಎಲ್ಲ ಯೋಜನೆ ಕೈ ಬಿಡಲಾಗಿತ್ತು. ಪ್ರಸ್ತುತ ಸಂಸದರೇ ಸೂಚಿಸಿದಂತೆ ನೆಲ್ಯಾಡಿಯ ಫೆಡರಲ್ ಬ್ಯಾಂಕ್ ಮುಂಭಾಗ ರಸ್ತೆಯಿಂದ ಡಿಯೋನ ಸ್ಕ್ವೇರ್ ತನಕದ ರಸ್ತೆಯಲ್ಲಿ ಐದು ಅಂಡರ್ ಪಾಸ್‌ಗಳನ್ನು ಒಳಗೊಂಡ ಫ್ಲೈ ಓವರ್ ನಿರ್ಮಿಸುವುದಾಗಿ ತೀರ್ಮಾನಕ್ಕೆ ಬರಲಾಗಿತ್ತು. ಇವೆಲ್ಲ ಪ್ರಕ್ರಿಯೆಗಳು ದೀರ್ಘ ಸಮಯ ತೆಗೆದುಕೊಂಡ ಕಾರಣ ಹಾಗೂ ವಾಡಿಕೆಗಿಂತ ಮುಂಚೆ ಮಳೆ ಆರಂಭವಾದ ಕಾರಣ ಹೆದ್ದಾರಿ ಕಾಮಗಾರಿ ಅರ್ಧದಲ್ಲಿಯೇ ನಿಂತಿದೆ.

ಮೃತ್ಯುಕೂಪದಂತಾದ ಸರ್ವೀಸ್ ರಸ್ತೆಗಳು

ಫ್ಲೈ ಓವರ್ ಕಾಮಗಾರಿ ಸ್ಥಗಿತಗೊಂಡಿರುವ ಪರಿಣಾಮ ಕಿರಿದಾದ ಸರ್ವೀಸ್ ರಸ್ತೆಯಲ್ಲೇ ವಾಹನಗಳು ಓಡಾಡಬೇಕಾದ ಸ್ಥಿತಿ ಇದೆ. ಮಳೆ ವೇಳೆ ನೀರು ಹರಿದು ಹೋಗಲೂ ಸಮರ್ಪಕ ವ್ಯವಸ್ಥೆಯಿಲ್ಲದ ಕಾರಣ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ. ಜೋರಾಗಿ ಮಳೆ ಬಂದಾಗ ರಸ್ತೆಯೇ ಕೆರೆಯಂತಾಗುತ್ತಿದ್ದು ಮಂಗಳೂರು- ಬೆಂಗಳೂರು ಪ್ರಯಾಣಿಕರಿಗೆ ಮೃತ್ಯುಕೂಪದಂತೆ ಕಾಡುತ್ತಿದೆ. ಟ್ಯಾಂಕರ್, ಕಂಟೇನರ್, ವೇಗಧೂತ ಬಸ್‌ಗಳು ಸೇರಿದಂತೆ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದ್ದು, ಟ್ರಾಫಿಕ್ ಜಾಮ್ ಸಮಸ್ಯೆಯೂ ಇದೆ.

ನೆಲ್ಯಾಡಿ ಪೇಟೆಯನ್ನು ಪ್ರವೇಶಿಸಲು ಇರುವ ಹೆದ್ದಾರಿ ರಸ್ತೆ.
ನೆಲ್ಯಾಡಿ ಪೇಟೆಯನ್ನು ಪ್ರವೇಶಿಸಲು ಇರುವ ಹೆದ್ದಾರಿ ರಸ್ತೆ.

ಅಭಿವೃದ್ಧಿ ಪಥದಲ್ಲಿದ್ದ ನೆಲ್ಯಾಡಿ ಎತ್ತರಿಸಲ್ಪಟ್ಟ ಹೈವೇ ಮೂಲಕ ಪೇಟೆಯನ್ನು ಮರೆಯಾಗಿಸುತ್ತದೆ. ಆದರೂ ಇಲ್ಲಿನ ವರ್ತಕರು, ಸಾರ್ವಜನಿಕರು ನಿಷ್ಕರ್ಷಕ್ಕೆ ಬಂದು ಸಂಸದರ ಸೂಚನೆಯಂತೆ ಪರಿಹಾರ ಕಂಡುಕೊಂಡಿದ್ದೇವೆ. ಮಳೆಗಾಲದ ನಾಲ್ಕು ತಿಂಗಳು ಹೆದ್ದಾರಿ ಪ್ರಾಧಿಕಾರದವರು ನೆಲ್ಯಾಡಿಯ ಸರ್ವೀಸ್ ರಸ್ತೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಕೊಂಡು ಬಂದರೆ ಇಲ್ಲಿನ ಪ್ರಯಾಣ ಸುಧಾರಿಸಬಹುದು. ಮಳೆಗಾಲದಲ್ಲಿ ಅಂಡರ್ ಪಾಸ್‌ಗಳ ಕಾಮಗಾರಿ ಪೂರ್ಣಗೊಳಿಸುತ್ತಾ, ಮಳೆ ಕಡಿಮೆ ಆದ ಮೇಲೆ ಹೆದ್ದಾರಿ ಕಾಮಗಾರಿಯನ್ನು ತಕ್ಷಣಕ್ಕೆ ಕೈಗೆತ್ತಿಕೊಳ್ಳಬೇಕು. ಸತೀಶ್ ಕೆ.ಎಸ್ ಅಧ್ಯಕ್ಷ ನೆಲ್ಯಾಡಿ ವರ್ತಕರ ಸಂಘ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ಭಾಗದಲ್ಲಿ ಈ ವರ್ಷ ಮಳೆಗಾಲದಲ್ಲಿ ಈ ಹಿಂದಿನಂತೆ ಗುಡ್ಡಜರಿತ, ಮರ ಬೀಳುವುದು, ಕೃತಕ ನೆರೆ ಸೇರಿದಂತೆ ಯಾವುದೇ ತೊಂದರೆಗಳು ಸಂಭವಿಸುವ ಸಾಧ್ಯತೆ ಕಂಡುಬರುವುದಿಲ್ಲ. ಹೆದ್ದಾರಿ ಕಾಮಗಾರಿ ನಡೆಯುವ ಹಿನ್ನೆಲೆ ಪೆರಿಯ ಶಾಂತಿ ಹಾಗೂ ಮಣ್ಣಗುಂಡಿ ಸಮೀಪ ಗುಡ್ಡ ಜರಿತದ ಸಂಭವನೀಯತೆ ಇದ್ದರೂ ಹೆದ್ದಾರಿ ಇಲಾಖೆ, ಅರಣ್ಯ ಇಲಾಖೆಜತೆಗೆ ಪರಶುರಾಮ ಕ್ರೇನ್ ತಂಡದ ಸದಸ್ಯರು ಸಕ್ರಿಯವಾಗಿ ಈ ಹಿಂದಿನಂತೆ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದೇವೆ. ಸುಭಾಷ್, ಮುಖ್ಯಸ್ಥರು, ಪರಶುರಾಮ ಕ್ರೇನ್ ತಂಡ, ನೆಲ್ಯಾಡಿ-ಗುಂಡ್ಯ https://www.vijayavani.net/damage-in-various-places-in-puttur-gramanthara https://www.vijayavani.net/mazjar-kadavu-temporary-bridge-water-fall

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net