

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಮಂಗಳವಾರ ಸುರಿದ ಭಾರಿ ಮಳೆಗೆ ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಉಜಿರೆ- ಬೆಳ್ತಂಗಡಿ ರಸ್ತೆಯ ಸೆಕೆಂಡರಿ ಶಾಲೆಯಿಂದ ಬೆನಕ ಆಸ್ಪತ್ರೆ ತನಕ ಸುಮಾರು 500 ಮೀ ವ್ಯಾಪ್ತಿಯಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿದು ವಾಹನ ಸವಾರರು ಪರದಾಡಿದರು.
ಅಗಲ ಕಿರಿದಾದ ಈ ರಸ್ತೆಯ ಇಕ್ಕೆಲಗಳಲ್ಲಿ ಇರುವ ಚರಂಡಿಗಳು ಸರಿಯಾದ ನಿರ್ವಹಣೆ ಇಲ್ಲದೆ ಅಲ್ಲಲ್ಲಿ ಮುಚ್ಚಿದ್ದು, ಮಳೆ ನೀರು ರಸ್ತೆಯಲ್ಲೇ ಹರಿಯಿತು. ರಸ್ತೆಯ ಎರಡು ಬದಿ ಇರುವ ಅಂಗಡಿಗಳ ಮುಂಭಾಗದವರೆಗೂ ನೀರು ನುಗ್ಗಿತು. ಸುಮಾರು ಒಂದು ತಾಸಿನ ಬಳಿಕ ನೀರು ಇಳಿಯಿತು.
ಈ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ಮಳೆಗಾಲದಲ್ಲಿ ಆಗಾಗ ರಸ್ತೆಯಲ್ಲಿ ನೀರು ಹರಿದು ವಾಹನ ಸವಾರರು, ಅಂಗಡಿ ಮಾಲೀಕರು, ಪಾದಚಾರಿಗಳು ಕಷ್ಟ ಅನುಭವಿಸುತ್ತಿದ್ದಾರೆ. ಪಂಚಾಯಿತಿ ಮೂಲಕ ಕಾಮಗಾರಿ ನಿರ್ವಹಿಸಲಾಗಿದ್ದರೂ ಸಮಸ್ಯೆ ಮುಂದುವರಿದಿದೆ. ಚರಂಡಿಗಳಲ್ಲಿ ತಂದು ಹಾಕುವ ತ್ಯಾಜ್ಯಗಳಿಂದ ಮಳೆ ನೀರು ಸರಾಗವಾಗಿ ಹರಿಯಲು ಸಮಸ್ಯೆ ಉಂಟಾಗುತ್ತಿದೆ ಹಾಗೂ ಸಕಾಲಕ್ಕೆ ಸರಿಯಾಗಿ ಚರಂಡಿಯನ್ನು ದುರಸ್ತಿ ಮಾಡದಿರುವುದು ಪ್ರಮುಖ ಕಾರಣವಾಗಿದೆ. ಇಲ್ಲಿನ ಚರಂಡಿಯಲ್ಲಿ ಭಾರಿ ಪ್ರಮಾಣದಲ್ಲಿ ಗಿಡಗಂಟಿ ಬೆಳೆದಿದ್ದು ನೀರು ಹರಿಯಲು ಅಡ್ಡಿಯಾಗಿದೆ. ಅಲ್ಲಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಹೆಚ್ಚಿನ ಕಡೆ ಚರಂಡಿಗಳನ್ನು ಮುಚ್ಚಿದ್ದು ಇದರಿಂದ ಸಮಸ್ಯೆ ಉಲ್ಬಣಗೊಂಡಿದೆ. ಉಜಿರೆ ಕೆಳಗಿನ ಪೇಟೆಯ ಚರಂಡಿ ಅವಸ್ಥೆ ಬಗ್ಗೆ ಗ್ರಾಮಸಭೆಯಲ್ಲಿ ಪ್ರತಿಬಾರಿ ಚರ್ಚೆ ನಡೆಯುತ್ತಿದ್ದರು ಯಾವುದೇ ಪರಿಹಾರ ಸಿಗುತ್ತಿಲ್ಲ ಎಂದು ಇಲ್ಲಿನ ಸಾರ್ವಜನಿಕರು ತಿಳಿಸಿದ್ದಾರೆ.
ಗುರುವಾಯನಕೆರೆಯಿಂದ ಅಳದಂಗಡಿ ನಾವರ ತನಕ ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿಗೆ ವರ್ಷ ಪೂರ್ತಿ ಆಗುವ ಮೊದಲೇ (ಶಕ್ತಿನಗರ) ಪೊಟ್ಟುಕೆರೆ ಸರ್ಕಲ್‌ನ ಬಳಿ ರಸ್ತೆ ಮಧ್ಯೆ ಅಪಾಯಕಾರಿ ಹೊಂಡ ಕಂಡು ಬಂದಿದ್ದು, ಕೇವಲ ರಸ್ತೆ ಅಗಲವಾಗಿದ್ದು ಮಾತ್ರ ಆದರೆ ಡಾಮಾರಿಕರಣ ಅಷ್ಟು ತೃಪ್ತಿಕರಣವಾಗಿಲ್ಲ ಎಂದು ಇಲ್ಲಿನ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದರು.
ಪೇರೋಡಿತ್ತಾಯ ಕಟ್ಟೆಯ ಕೇಂದ್ರ ಭಾಗದಲ್ಲಿರುವ ಮಿತ್ರ ಯುವಕ ಮಂಡಲ ತೆಂಕ ಕಾರಂದೂರು ಇವರ ವತಿಯಿಂದ ನಿರ್ಮಿಸಲ್ಪಿಟ್ಟಿದ್ದ ಕಟ್ಟೆಯ ಬಸ್ಸು ತಂಗುದಾಣ ಸಂಪೂರ್ಣವಾಗಿ ಕುಸಿದಿದೆ. ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಅಕ್ಕಪಕ್ಕದ ಅಂಗಡಿಗಳ ಎದುರು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.