

ಹಟ್ಟಿಚಿನ್ನದಗಣಿ: ಬಿದಿರಿನ ಪುಟ್ಟಿಯಲ್ಲಿ ಜೋಕುಮಾರಸ್ವಾಮಿಯನ್ನು ಹೊತ್ತು ಮನೆಗಳಿಗೆ ತೆರಳಿ ಜಾನಪದ ಸೊಗಡಿನ ಹಾಡುಗಳನ್ನು ಹಾಡುತ್ತಾ ತೆರಳುತ್ತಿರುವ ದೃಶ್ಯ ಗೌಡೂರು, ಗೆಜ್ಜಲಗಟ್ಟಾ ಸೇರಿ ನಾನಾ ಗ್ರಾಮಗಳಲ್ಲಿ ಕಂಡು ಬರುತ್ತಿದೆ.
ಗಣೇಶ ಚತುರ್ಥಿ ನಂತರ ಜೋಕುಮಾರ ಸ್ವಾಮಿಯ ಹಬ್ಬ ಬರುತ್ತದೆ. ಗಣೇಶ ಶಿಷ್ಟ ಸಂಸ್ಕೃತಿಯ ವಾರಸುದಾರನಾದರೆ, ಜೋಕುಮಾರ ಸ್ವಾಮಿ ಜಾನಪದ ಸಂಸ್ಕೃತಿಯ ಪ್ರತೀಕವಾಗಿದ್ದಾನೆ. ಎಣ್ಣೆ ಮತ್ತು ಹುತ್ತಿನ ಮಣ್ಣಿನಿಂದ ಬೇವಿನ ಎಲೆ ಮಧ್ಯೆ ಬಿದಿರಿನ ಪುಟ್ಟಿಯಲ್ಲಿ ಜೋಕುಮಾರನನ್ನು ಪ್ರತಿಷ್ಠಾಪಿಸಿ ಬೆನಕನ ಅಮವಾಸ್ಯೆಯ ಏಳನೇ ದಿನದಿಂದ ಹುಣ್ಣಿಮೆವರೆಗೆ ಗಂಗಾಮತ ಸಮುದಾಯದ ಮಹಿಳೆಯರು ಹಾಡುತ್ತಾ, ಧಾನ್ಯ ಬೇಡುತ್ತಾ ಪೂಜಿಸುತ್ತಾರೆ.
ಸಮೃದ್ಧ ಮಳೆ ತರಿಸುವ, ಬೆಳೆ ಕಾಪಾಡುವ ಹಾಗೂ ಸಮೃದ್ಧಿಯ ಸಂಕೇತವಾದ ಜೋಕ ಮತ್ತು ಎಳೆಗೌರಿ ಮಗನಾದ ಜೋಕುಮಾರನ ಆಚರಣೆ ತಲೆತಲಾಂತರಿದಿಂದ ಬಂದಿದೆ. ಕೃಷಿ ಸಮೂಹ ದೃಷ್ಟಿಯಲ್ಲಿ ಜೋಕುಮಾರ ಮಳೆ-ಬೆಳೆ ತರಿಸುವ, ಜನರ ಬಾಧೆ ದೂರ ಮಾಡುವ ದೇವನಾಗಿದ್ದಾನೆ. ಭಾದ್ರಪದ ಮಾಸದಲ್ಲಿ ಜನಿಸುವ ಜೋಕುಮಾರಸ್ವಾಮಿ ಆಯುಷ್ಯ ಕೇವಲ ಏಳು ದಿನವಾಗಿದೆ.