ಮಳೆ ಸೃಷ್ಟಿಸಿದ ಸಮಸ್ಯೆಗೆ ಸ್ಮಾರ್ಟ್‌ಸಿಟಿ ಕಾರಣ - ಪಾಲಿಕೆ ಆಯುಕ್ತ ಪಿ.ಎನ್.ಲೋಕೇಶ

1020
Published on

ಬೆಳಗಾವಿ: ಮಹಾನಗರದಲ್ಲಿ ಎರಡು ದಿನಗಳಿಂದ ಸುರಿದ ಮಳೆಯಿಂದ ಉದ್ಬವಿಸಿರುವ ಸಮಸ್ಯೆಗಳಿಗೆ ಸ್ಮಾರ್ಟ್‌ಸಿಟಿಯ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳೇ ಮೂಲ ಕಾರಣ ಎಂದು ಪಾಲಿಕೆ ಆಯುಕ್ತ ಪಿ.ಎನ್.ಲೋಕೇಶ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಚರಂಡಿಗಳು ಬ್ಲಾಕ್ ಆಗಿ ರಸ್ತೆಗಳ ಮೇಲೆ ನೀರು ಹರಿದಿದೆ. ಅಲ್ಲದೆ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮಳೆಯಿಂದ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಪಾಲಿಕೆ ಸಿಬ್ಬಂದಿ ಮಾಡುತ್ತಿದ್ದಾರೆ. ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗಿದೆ ಎಂದರು.

ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಗರದ 80 ಅಡಿ, 60 ಎಡಿ ಅಗಲದ ರಸ್ತೆಗಳು ಸೇರಿ ಎಲ್ಲ ಕಡೆ ರಸ್ತೆ, ಚರಂಡಿಗಳನ್ನು ನಿರ್ಮಿಸಲಾಗಿದೆ. ಆದರೆ, ರಸ್ತೆಗೆ ತಕ್ಕಂತೆ ಚರಂಡಿ ನಿರ್ಮಿಸಿಲ್ಲ. ದೊಡ್ಡ ಚರಂಡಿಗಳನ್ನು ಚಿಕ್ಕದಾಗಿ ನಿರ್ಮಿಸಲಾಗಿದೆ. ಕೆಲ ಭಾಗದಲ್ಲಿ ಚರಂಡಿಗಳಲ್ಲಿ ಪ್ಲಾಸ್ಟಿಕ್ ಚೆಲ್ಲಿದ್ದರಿಂದ ನೀರು ಭರ್ತಿಯಾಗಿ ರಸ್ತೆ ಮೇಲೆ ಹರಿದು ಸಮಸ್ಯೆ ಸೃಷ್ಟಿಸಿದೆ ಎಂದರು.

ಬೆಳಗಾವಿ ಮಹಾನಗರಕ್ಕೆ ನೀರು ಪೂರೈಕೆ ಮಾಡುವ ರಕ್ಕಸಕೊಪ್ಪ ಜಲಾಶಯದಲ್ಲಿ 2,255.65 ಅಡಿ ಮಾತ್ರ ನೀರು ಸಂಗ್ರಹವಿದ್ದು, 37 ದಿನಗಳವರೆಗೆ ಸಾಕಾಗುತ್ತದೆ. ದಿನದ 24 ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಗೆ ನೀರಿನ ಕೊರತೆ ಉಂಟಾಗಿದ್ದರಿಂದ ಕೆಲ ಭಾಗದಲ್ಲಿ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆ ಪರಿಹರಿಸಲು ಕ್ರಮ ವಹಿಸಲಾಗಿದೆ. ಜನರಿಗೆ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

145 ಗ್ರಾಮಗಳಲ್ಲಿ ನೀರಿನ ಸಮಸ್ಯೆ: ಜಿಲ್ಲೆಯಲ್ಲಿ 145 ಗ್ರಾಮಗಳಲ್ಲಿ ಕುಡಿಯುವ ಸಮಸ್ಯೆ ಉದ್ಬವಿಸಿದ್ದು, ನಿತ್ಯ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಬೆಳಗಾವಿ ಮಹಾನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಸರ್ಕಾರ ಬರ ನಿರ್ವಹಣೆ, ಕುಡಿಯುವ ನೀರಿಗಾಗಿ 247 ಕೋಟಿ ರೂ. ಬರ ಪರಿಹಾರವನ್ನು ಜಿಲ್ಲೆಗೆ ನೀಡಿದೆ.

ಜಾನುವಾರುಗಳಿಗೆ ಆರು ಮೇವಿನ ಬ್ಯಾಂಕ ತೆರೆಯಲಾಗಿದೆ. ಅಥಣಿಯ ಕಕಮರಿ, ಅನಂತಪುರ, ತೆಲಸಂಗ, ಚಿಕ್ಕೋಡಿ ತಾಲೂಕಿನ ಕಳಕೋಡ ಗೇಟ್, ಗೋಕಾಕನ ಕಡಬಗಟ್ಟಿ, ರಾಯಬಾಗ ತಾಲೂಕಿನ ಬೂದಿಹಾಳದಲ್ಲಿ ಮೇವು ಬ್ಯಾಂಕ್ ತೆರೆದು ರೈತರಿಗೆ ಮೇವು ಕೊಡುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net