

ನಾಪೋಕ್ಲು: ನಾಪೋಕ್ಲುವಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮುಂಗಾರು ಮಳೆ ಆರ್ಭಟ ಮೂರು ದಿನಗಳಿಂದ ಮುಂದುವರಿದಿದ್ದು ಅಲ್ಲಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿ ಒಂದು ಕಡೆಯಾದರೆ ಕೆಲವು ಕಡೆ ಮನೆ ಹಾಗೂ ತಡೆಗೋಡೆಗಳಿಗೆ ಹಾನಿಯಾಗಿದೆ.
ಇಲ್ಲಿಗೆ ಸಮೀಪದ ಕಲ್ಲು ಮೊಟ್ಟೆಯಲ್ಲಿ ಮಳೆ, ಗಾಳಿಯಿಂದಾಗಿ ಮನೆ ತಡೆಗೋಡೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಕಲ್ಲು ಮೊಟ್ಟೆ ನಿವಾಸಿ ಕೆ.ಕೆ.ಪುಷ್ಪಾ ಅವರ ನೂತನ ಮನೆಗೆ ಸುಮಾರು 40 ಅಡಿ ಉದ್ದ ಹಾಗೂ 8 ಅಡಿ ಎತ್ತರದ ತಡೆಗೋಡೆ ನಿರ್ಮಿಸಿದ್ದು ಭಾನುವಾರ ರಾತ್ರಿ ಅಧಿಕ ಮಳೆ, ಗಾಳಿಯಿಂದ ಸಂಪೂರ್ಣ ಕುಸಿದಿದೆ.
ಇಲ್ಲಿಗೆ ಸಮೀಪದ ಎಮ್ಮೆಮಾಡು-ಕೂರುಳಿ ರಸ್ತೆಯಲ್ಲಿ ಸೋಮವಾರ ಅಡ್ಡಲಾಗಿ ಬಿದ್ದ ಮರದಿಂದ ಸಂಚಾರಕ್ಕೆ ತೊಡಕಾಗಿದೆ. ಎಮ್ಮೆಮಾಡು ಕೂರುಳಿ ಗ್ರಾಮಕ್ಕೆ ತೆರಳುವ ಸುಭಾಷ್ ನಗರ ಪೈಸಾರಿ ಬಳಿಯ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಚಾರಕ್ಕೆ ತೊಡಕುಂಟಾಗಿದೆ. ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಕ್ಕೆ ಹಾನಿಯಾಗಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.
ನಾಪೋಕ್ಲುವಿನಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಬೇತು ರಸ್ತೆಯಲ್ಲಿರುವ ಹಂಸ ಅವರ ಒಡೆತನದ ಮಣ್ಣಿನಿಂದ ನಿರ್ಮಿಸಿದ ಹಳೇ ಕಟ್ಟಡದ ಛಾವಣಿ ಕುಸಿತವಾಗಿದೆ. ಕಟ್ಟಡದ ಮರು ನಿರ್ಮಾಣದ ಹಿನ್ನೆಲೆ ಕೆಲವು ತಿಂಗಳುಗಳ ಹಿಂದೆ ಇದರಲ್ಲಿ ವ್ಯಾಪಾರ ಮಾಡುತ್ತಿರುವವರನ್ನು ತೆರವುಗೊಳಿಸಲಾಗಿತ್ತು. ಸೋಮವಾರ ಮುಂಜಾನೆ ಕಟ್ಟಡ ಕುಸಿದಿದ್ದು ಛಾವಣಿಯ ಮರ ಮುಟ್ಟುಗಳು ಹಾಗೂ ಹೆಂಚುಗಳು ಹಾನಿಯಾಗಿವೆ.
ನಾಪೋಕ್ಲು ಕೈಕಾಡು ಪಾರಾಣೆ ಮಾರ್ಗವಾಗಿ ವಿರಾಜಪೇಟೆಗೆ ತೆರಳುವ ಮುಖ್ಯ ರಸ್ತೆಗೆ ಬುಡ ಸಮೇತ ಮರ ಬಿದ್ದಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಪಾರಾಣೆಯಿಂದ ಬೆಳ್ಳುಮಾಡುವಿಗೆ ತೆರಳುವ ಮುಖ್ಯ ರಸ್ತೆಯ ವಲ್ಲಂಡ ಕೊಟ್ಟ್‌ನ ಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಚಾರಕ್ಕೆ ತೊಡಕುಂಟಾಗಿತ್ತು. ಬಳಿಕ ಸಾರ್ವಜನಿಕರು ಹಾಗೂ ಜೆಸಿಪಿ ಯಂತ್ರದ ಮೂಲಕ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಕರಡ ಗ್ರಾಮದ ನಿವಾಸಿಯಾಗಿರುವ ಸುಮಿತ್ರಾ ಅವರ ವಾಸದ ಮನೆಯ ಛಾವಣಿಗೆ ಅಳವಡಿಸಿದ್ದ ಸಿಮೆಂಟ್ ಶೀಟ್ ಗಾಳಿ ಮಳೆಗೆ ಹಾರಿ ಹೋಗಿದ್ದು ನಷ್ಟ ಸಂಭವಿಸಿದೆ . ಇದೇ ಗ್ರಾಮದ ದೇವಯ್ಯ ಅವರ ವಾಸದ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದು ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಕೊಳಕೇರಿ ಗ್ರಾಮದ ಬೀರಾನ್ ಅವರ ಮನೆ ಮೇಲೆ ಭಾರಿ ಗಾತ್ರದ ಮರ ಬಿದ್ದು ಮನೆ ಆರ್‌ಸಿಸಿ ಹಾನಿಯಾಗಿದೆ. ಈ ವರ್ಷ ಬೇಗನೆ ಪ್ರಾರಂಭವಾದ ಮುಂಗಾರು ಬಿರುಸಿನ ಮಳೆ ಗಾಳಿಯಿಂದಾಗಿ ಜನರು ಸಮಸ್ಯೆ ಎದುರಿಸುವಂತಾಗಿದೆ. ವಿದ್ಯುತ್ ಕಂಬಗಳು ಮುರಿದು ಬಿದ್ದ ಕಾರಣದಿಂದ ವಿದ್ಯುತ್ ಪೂರೈಕೆ ಇಲ್ಲದೆ ಹಲವು ಕಡೆ ಕತ್ತಲಲ್ಲಿ ದಿನ ಕಳೆಯುವಂತಾಗಿದೆ. ಈ ವ್ಯಾಪ್ತಿಯಲ್ಲಿ 20ಕ್ಕೂ ಅಧಿಕ ವಿದ್ಯುತ್ ಕಂಬಗಳ ತುಂಡಾಗಿ ಬಿದ್ದಿದ್ದು ಸರಿಪಡಿಸುವಲ್ಲಿ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ.
ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆಯ ಪ್ರಮಾಣ ನಾಲಡಿಯಲ್ಲಿ 224.6 ಮಿ.ಮೀ. ಗರಿಷ್ಠ ಮಳೆಯಾಗಿದೆ. ನಾಪೋಕ್ಲು ಪಟ್ಟಣ ವ್ಯಾಪ್ತಿಯಲ್ಲಿ 126.2 ಮಿ.ಮೀ.ಮಳೆ ಸುರಿದಿದೆ. ನೆಲಜಿ ಗ್ರಾಮದಲ್ಲಿ 7.50 ಇಂಚು, ಅಯ್ಯಂಗೇರಿಯಲ್ಲಿ 7.47 ಇಂಚು ಮಳೆಯಾಗಿದ್ದು ಜನವರಿಯಿಂದ ಇಂದಿನವರೆಗೆ ಒಟ್ಟು 26.94 ಇಂಚು ಮಳೆಯಾಗಿದೆ.