

ಬಣಕಲ್: ಮೂಡಿಗೆರೆ ತಾಲೂಕಿನಾದ್ಯಂತ ಭಾನುವಾರ ರಾತ್ರಿ ಸುರಿದ ಮಳೆಯಿಂದ ಕಾಫಿ ಹಾಗೂ ಭತ್ತದ ಬೆಳೆಗಳಿಗೆ ಅಪಾರ ಹಾನಿಯಾಗಿದೆ.
ತರುವೆ, ಅತ್ತಿಗೆರೆ, ಬಾಳೂರು, ಬಿನ್ನಡಿ, ಕುಂದೂರು ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಕಣದಲ್ಲಿ ಒಣಗಲು ಹಾಕಿದ ಕಾಫಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಹಲವೆಡೆ ಭತ್ತದ ಕೊಯ್ಲು ಪ್ರಾರಂಭವಾಗಿದ್ದು, ಬಹುತೇಕ ರೈತರು ಭತ್ತ ಹಾಗೂ ಹುಲ್ಲನ್ನು ಗದ್ದೆಯಲ್ಲಿ ಸಂಗ್ರಹಿಸಿ ಒಕ್ಕಲು ಮಾಡಲು ಸಿದ್ಧತೆ ನಡೆಸಿದ್ದರು. ಆದರೆ ದಿಢೀರ್ ಸುರಿದ ಮಳೆಯಿಂದ ಭತ್ತ ಹಾಗೂ ಹುಲ್ಲು ಕಪ್ಪಾಗಿ ಕ್ರಮೇಣ ಕಹಿಯಾಗುವುದರಿಂದ ಜಾನುವಾರುಗಳಿಗೂ ನೀಡಲು ಸಾಧ್ಯವಿಲ್ಲ.
ದೊಡ್ಡ ಎಸ್ಟೇಟ್ಗಳ ಕಾಫಿ ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಕಣದಲ್ಲಿ ಹರಡಿದ ಕಾಫಿಯನ್ನು ಮಳೆಯಿಂದ ರಕ್ಷಿಸಲಾಗದೆ ಕೈಚೆಲ್ಲಿದರು. ಕಣದ ಅಂಚಿನಲ್ಲಿ ಮಳೆ ನೀರಿನ ಜತೆಗೆ ಕೊಚ್ಚಿ ಹೋಗುತ್ತಿದ್ದ ಕಾಫಿ ಬೀಜವನ್ನು ಜಾಲರಿ ಮೂಲಕ ಸಂಗ್ರಹಿದರು.
ಅಕಾಲಿಕ ಮಳೆಯಿಂದ ಕಾಫಿ ಹೂ ಅರಳಲಿದೆ. ಈ ವೇಳೆ ಕಾಫಿ ಕೊಯ್ಲಿ ಮಾಡುತ್ತಿರುವುದರಿಂದ ಕೊಯ್ಲಿನ ಸಮಯದಲ್ಲಿ ಗಿಡದಲ್ಲಿರುವ ಹೂವಿಗೆ ಹಾನಿಯಾಗಲಿದೆ. ಹೂವುಗಳು ಕಾಯಿಗಟ್ಟಿದರೂ ಮುಂದಿನ ವರ್ಷದ ಮಳೆಗಾಲದಲ್ಲಿ ಕಾಫಿ ಕೊಯ್ಲಿಗೆ ಬರುವುದರಿಂದ ಮತ್ತೆ ಕಾಫಿ ನೆಲ ಕಚ್ಚುವ ಸಂಭವವಿದೆ.
ಸಾಮಾನ್ಯವಾಗಿ ಭತ್ತದ ಕೊಯ್ಲು ಮುಗಿದ ನಂತರ ಗದ್ದೆಯಲ್ಲಿ ಒಣಗಲು ಬಿಟ್ಟು ವಾರದ ನಂತರ ಕಣಕ್ಕೆ ಸಾಗಿಸಲಾಗುತ್ತದೆ. ಆದರೆ ಭಾನುವಾರ ಭತ್ತ ಕೊಯ್ಲು ಮಾಡಲಾಗಿತ್ತು. ಅಕಾಲಿಕವಾಗಿ ಸುರಿದ ಮಳೆಯಿಂದ ಭತ್ತ ನೆನೆದು ನಷ್ಟವಾಗಿದೆ ಎಂದು ಕೃಷಿಕ ಸಂಜಯ ಗೌಡ ಅಳಲು ತೋಡಿಕೊಂಡರು.