

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನಲ್ಲಿ ಗುಡುಗು-ಸಿಡಿಲು ಹೆಚ್ಚಿರುತ್ತದೆ. ಸಿಡಿಲು ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆಯಲ್ಲಿ ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ ಅಪಾಯಗಳನ್ನು ತಗ್ಗಿಸಲು ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದ್ದಾರೆ.
ಸಿಡಿಲಿಗೆ ಸಾಮಾನ್ಯವಾಗಿ ತುತ್ತಾಗುವಂತಹ ಸ್ಥಳಗಳನ್ನು ಗುರುತಿಸಿ ಸಾರ್ವಜನಿಕ ಆಸ್ತಿ, ಮೂಲಸೌಕರ್ಯಗಳ ರಕ್ಷಣೆಗೆ ಕ್ರಮ ಕೈಗೊಳ್ಳುವುದು, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಸಿಡಿಲಿನ ಮುನ್ಸೂಚನೆಗಳನ್ನು ಮಾಧ್ಯಮಗಳ ಮೂಲಕ ಸ್ಥಳೀಯಮಟ್ಟಕ್ಕೆ ತಲುಪಿಸಲು, ಈ ಕುರಿತು ಅರಿವು ಮೂಡಿಸುವುದು. ರೈತ ಸಂಪರ್ಕ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಾಥಮಿಕ ಪಶು ವೈದ್ಯಕೀಯ ಚಿಕಿತ್ಸಾ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿಗಳ ಮೂಲಕವೂ ಮಾಹಿತಿ ಜತೆಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಗುಡುಗು ಮತ್ತು ಸಿಡಿಲು ಬಡಿತದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಸಲಹೆ ಸೂಚನೆಗಳನ್ನು ನೀಡಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಅಧಿಕಾರಿಗಳು ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದ್ದಾರೆ.
ಅಪಾಯದ ಅರಿವು ಅಗತ್ಯ ಗುಡುಗು-ಸಿಡಿಲು ಸಂದರ್ಭಗಳಲ್ಲಿ ಮಾಧ್ಯಮಗಳ ಮೂಲಕ ಮಾಡಬೇಕಾದ ಮತ್ತು ಮಾಡಬಾರದ ಪ್ರಕ್ರಿಯೆಗಳ ಕುರಿತು ಪ್ರಸಾರ ಮಾಡುವುದು ಹಾಗೂ ಮಾಹಿತಿ ಶಿಕ್ಷಣ ಸಂವಹನ (ಐಇಸಿ) ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಪ್ರತಿಕೂಲ ಹವಾಮಾನದ ಸಮಯದಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು, ಜಾನುವಾರು ಮೇಯಿಸಲು, ಮೀನುಗಾರಿಕೆ ಮತ್ತು ದೋಣಿಗಳನ್ನು ಓಡಿಸಲು ಅಥವಾ ಸಾಮಾನ್ಯ ಪ್ರಯಾಣಕ್ಕಾಗಿ ಮನೆಯಿಂದ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಗುಡುಗು-ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ, ಸುರಕ್ಷಿತವಾದ ಕಟ್ಟಡಗಳಲ್ಲಿ ಅಶ್ರಯ ಪಡೆಯಬೇಕು. ಕೆರೆ ಮತ್ತು ನದಿಗಳಿಂದ ದೂರವಿದ್ದು, ವಿದ್ಯುತ್ ಉಪಕರಣ ಹಾಗೂ ವಿದ್ಯುತ್ ಸರಬರಾಜು ಮಾರ್ಗ. ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರಬೇಕು. ವಾಹನ ಚಾಲನೆಯಲ್ಲಿದ್ದರೆ ತಕ್ಷಣವೇ ವಾಹನ ನಿಲ್ಲಿಸಿ ವಾಹನದಲ್ಲಿಯೇ ಆಶ್ರಯ
ಪಡೆಯುವುದು. ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಲು ಸಾಕಷ್ಟು ಸಮಯವಿಲ್ಲದಿದ್ದರೆ, ಎರಡು
ಕಾಲುಗಳನ್ನು ಜೋಡಿಸಿ ಮಂಡಿಯೂರಿ ಕುಳಿತುಕೊಂಡು ತಲೆಯನ್ನು ಬಗ್ಗಿಸಿ ಕಿವಿಗಳನ್ನು
ಮುಚ್ಚಿಕೊಳ್ಳಬೇಕು ಎಂದು ಡಿಸಿ ಆರ್.ಲತಾ ತಿಳಿಸಿದರು.
ಮಿಂಚು ಆಕರ್ಷಿಸುವ ವಸ್ತುಗಳಿಂದ ದೂರವಿರಿ ವಿದ್ಯುತ್ ಅಥವಾ ಟೆಲಿಫೋನ್ ಕಂಬಗಳು ಅಥವಾ ಮರಗಳ ಕೆಳಗೆ ಆಶ್ರಯ ಪಡೆಯಬಾರದು. ಇವು ಮಿಂಚನ್ನು ಆಕರ್ಷಿಸುತ್ತವೆ. ಸಿಡಿಲು ಸಂದರ್ಭದಲ್ಲಿ ಮೊಬೈಲ್ ಬಳಸಬಾರದು. ಕಬ್ಬಿಣದ ಸರಳುಗಳಿಂದ ಕೂಡಿದ ಛತ್ರಿಗಳನ್ನು ಬಳಸಬಾರದು. ಸಿಡಿಲು ಸಂದರ್ಭದಲ್ಲಿ ಕಟ್ಟಡದ ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ಹರಿಯುವ ಸಾಧ್ಯತೆ ಇರುವುದರಿಂದ, ಸಿಡಿಲು ಉಂಟಾಗುವ ಸಂದರ್ಭದಲ್ಲಿ ಸ್ನಾನ ಅಥವಾ ಶವರ್ ತೆಗೆದುಕೊಳ್ಳಬಾರದು, ಪಾತ್ರೆಗಳನ್ನು ತೊಳೆಯಬಾರದು, ಬಟ್ಟೆ ಹೊಗೆಯಬಾರದು. ವಿದ್ಯುತ್ ಸಂಪರ್ಕ ಹೊಂದಿರುವ ದೂರವಾಣಿ ಬಳಸಬಾರದು. ಪ್ರಯಾಣವನ್ನು ಮುಂದೂಡಬೇಕು, ಆಟದ ಮೈದಾನ, ಉದ್ಯಾನವನಗಳು ಈಜುಕೊಳ ಮತ್ತು ಕಡಲ ತೀರಗಳಿಗೆ ಹೋಗುವುದನ್ನು ತಪ್ಪಿಸುವುದು. ದೋಣಿ ವಿಹಾರ ಅಥವಾ ಈಜುತ್ತಿದ್ದರೆ, ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವುದು. ಸಿಡಿಲಿನ ವೇಳೆ ವಾಹನ ಕಿಟಕಿಗಳನ್ನು ಮುಚ್ಚಿ, ವಾಹನದ ಒಳಗೆ ಇರುವುದು. ಅರಣ್ಯ, ಪುದೇಶದಿಂದ, ಗಿಡ-ಗಡ್ಡೆಗಳಿಲ್ಲದ ಸ್ವಚ್ಛ ಪ್ರದೇಶದ ಕಡೆಗೆ ಚಲಿಸುವುದು, ಮಿಂಚಿನ ಹೊಡೆತದಿಂದಾಗಿ ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆಯಿದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.