

ದೇವದುರ್ಗ: ತಾಲೂಕಿನ ಜಾಲಹಳ್ಳಿಯಲ್ಲಿ ಶುಕ್ರವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಸಂಪರ್ಕ ಕಲ್ಪಿಸುವ ಕಿರುಸೇತುವೆ ಕೊಚ್ಚಿಹೋಗಿದೆ.
ಶಾಲೆ ಮುಂಭಾಗದಲ್ಲಿ ಹಳ್ಳವಿದ್ದು ಹಲವು ವರ್ಷಗಳ ಹಿಂದೆ ಕಿರುಸೇತುವೆ ನಿರ್ಮಿಸಲಾಗಿತ್ತು. ಮಳೆಯಿಂದಾಗಿ ಹೊಲದ ನೀರು ಹಳ್ಳಕ್ಕೆ ಹರಿದುಬಂದಿದ್ದು ರಭಸಕ್ಕೆ ಕಿರುಸೇತುವೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಇದರಿಂದ ಶಾಲೆಗೆ ಸಂಪರ್ಕ ಕಡಿತವಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ತಾಪಂ ಇಒ ಬಸವರಾಜ ಹಟ್ಟಿ, ಪಿಡಿಒ ನರಸಪ್ಪ, ಗ್ರಾಪಂ ಅಧ್ಯಕ್ಷೆ ರೇವತಿ ಶಂಕರಗೌಡ ಭೇಟಿ ನೀಡಿ ಪರಿಶೀಲಿಸಿದರು. ವಿದ್ಯುತ್ ಕಂಬಗಳನ್ನು ಹಾಕಿ ತಾತ್ಕಾಲಿಕ ಸೇತುವೆ ನಿರ್ಮಿಸಿ ಜನರಿಗೆ ಸಂಪರ್ಕ ವ್ಯವಸ್ಥೆ ಮಾಡಲಾಗುವುದು ಎಂದರು.
ಪೈಪ್‌ಗಳನ್ನು ಹಾಕಿ ಸೇತುವೆ ನಿರ್ಮಿಸಿದರೆ ಮತ್ತೆ ಕೊಚ್ಚಿ ಹೋಗಲಿದ್ದು, ಗೋಡೆ ನಿರ್ಮಾಣ ಮಾಡಿ ಸೇತುವೆ ನಿರ್ಮಿಸಬೇಕು. ಇದಕ್ಕೆ 25ರಿಂದ 30 ಲಕ್ಷ ರೂ. ವೆಚ್ಚವಾಗಲಿದೆ ಎಂದು ಜಿಪಂ ಇಂಜಿನಿಯರ್ ತಿಪ್ಪಣ್ಣ ತಿಳಿಸಿದರು. ಪಿಡಿಒ ನರಸಪ್ಪ ಮಾತನಾಡಿ, ಗ್ರಾಪಂನಿಂದ ಸೇತುವೆ ನಿರ್ಮಾಣ ಸಾಧ್ಯವಿಲ್ಲ. ಸದ್ಯ ವಿದ್ಯುತ್‌ಕಂಬ ಅಡ್ಡಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.