

ಅರಕಲಗೂಡು: ತಾಲೂಕಿನಲ್ಲಿ ಸುರಿದ ಜಿಟಿಜಿಟಿ ಮಳೆೆ ಹಿಂಗಾರು ಬೆಳೆಗಳ ಬೆಳವಣಿಗೆಗೆ ವರದಾನವಾಗಿದ್ದು ರೈತಾಪಿ ವರ್ಗದ ಜನರಲ್ಲಿ ಸಂತಸ ಮೂಡಿಸಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾದ ಚಂಡಮಾರುತದ ಪರಿಣಾಮ ಮಂಗಳವಾರ ದಿನವಿಡೀ ಬಿಟ್ಟು ಬಿಟ್ಟು ಸುರಿದ ಜಿಟಿಜಿಟಿ ಸೋನೆ ಮಳೆ ಬುಧವಾರ ಬಿಡುವು ನೀಡಿತ್ತು. ಮಳೆಯಿಂದಾಗಿ ಬಾಡುತ್ತಿದ್ದ ಹಿಂಗಾರು ಬೆಳೆಗಳು ಚೇತರಿಕೆ ಕಾಣಲಾರಂಭಿಸಿವೆ.
ತಾಲೂಕಿನಲ್ಲಿ ಪ್ರಮುಖವಾಗಿ ಮುಂಗಾರಿನಲ್ಲಿ ಬೆಳೆದ ತಂಬಾಕು, ಶುಂಠಿ, ಆಲೂಗಡ್ಡೆ, ಮುಸುಕಿನ ಜೋಳದ ಬೆಳೆಗಳ ಕಟಾವು ಮುಗಿಸಿದ ರೈತರು ಹಿಂಗಾರು ಬೆಳೆಯಾಗಿ ರಾಗಿ ಬಿತ್ತನೆ ನಡೆಸಿದ್ದರು. ಕಳೆದ ಎರಡು ವಾರಗಳಿಂದ ಮಳೆಯಿಲ್ಲದ ಪ್ರಮುಖ ಆಹಾರ ಬೆಳೆಯಾಗಿದ್ದ ರಾಗಿ ಪೈರುಗಳು ಒಣಗುತ್ತಿದ್ದು ರೈತರ ಆತಂಕಕ್ಕೆ ಕಾರಣವಾಗಿತ್ತು. ಹುರುಳಿ, ಅಲಸಂದೆ ಮತ್ತಿತರ ದ್ವಿದಳ ಧಾನ್ಯ ಬೆಳೆಗಳು ವರುಣನ ಅವಕೃಪೆಗೆ ತುತ್ತಾಗಿ ಬಾಡುತ್ತಿದ್ದವು. ನೀರಾವರಿ ಸೌಲಭ್ಯ ಹೊಂದಿದ್ದ ಕೆಲವೇ ರೈತರು ಹನಿ ನೀರಾವರಿ ಮೂಲಕ ಬೆಳೆ ರಕ್ಷಣೆಗೆ ಮುಂದಾಗಿದ್ದರು. ಸಾಕಷ್ಟು ಕಡೆ ಮಳೆಯಿಲ್ಲದೆ ಅನ್ನದಾತರು ಮುಗಿಲಿನತ್ತ ಮುಖ ಮಾಡುವಂತಾಗಿತ್ತು. ಇದೀಗ ಬಿದ್ದ ಜಿಟಿಜಿಟಿ ಸೋನೆ ಮಳೆಗೆ ಉತ್ತಮ ತೇವಾಂಶ ನೀಡಿದ್ದು ಒಣಗುತ್ತಿದ್ದ ಹಿಂಗಾರು ಬೆಳೆಗಳಿಗೆ ಜೀವಕಳೆ ಬಂದಂತಾಗಿ ರೈತರು ನಿಟ್ಟುಸಿರು ಬಿಡುವಂತಾಗಿದೆ.
ತಾಲೂಕಿನಲ್ಲಿ ಭತ್ತದ ಬೆಳೆಗಂತೂ ಮಳೆ ವರದಾನವಾಗಿದೆ. ಹಾರಂಗಿ, ಹೇಮಾವತಿ, ಕಟ್ಟೇಪುರ ನಾಲಾ ಅಚ್ಚುಕಟ್ಟಿನ ಸಾವಿರಾರು ಎಕರೆ ಜಮೀನಿನಲ್ಲಿ ನಾಟಿ ಮಾಡಿದ ಭತ್ತದ ಗದ್ದೆಗಳು ಮಳೆಯಿಲ್ಲದೆ ಸೊರಗಿದ್ದವು. ಕೆಲವು ಕಡೆ ಹುಳು ಹತ್ತಿ ಬೆಂಕಿ ರೋಗ ಕಾಣಿಸಿಕೊಂಡು ಬೆಳೆ ಹಾಳಾಗಿ ರೈತರನ್ನು ಕಂಗೆಡಿಸಿತ್ತು. ಔಷಧ ಸಿಂಪಡಣೆ ಮಾಡಿದರೂ ಬೆಂಕಿ ರೋಗ ಹಾಗೂ ಹುಳುಗಳನ್ನು ಹತೋಟಿಗೆ ತರಲು ಸಾಧ್ಯವಾಗಿರಲಿಲ್ಲ. ಭತ್ತದ ಬೆಳೆಗೆ ಪ್ರಮುಖವಾಗಿ ಮಳೆ ಬೀಳಬೇಕಿತ್ತು. ತಡವಾಗಿಯಾದರೂ ವರುಣ ಕೃಪೆ ತೋರಿದ್ದರಿಂದ ಭತ್ತದ ಬೆಳೆಯ ಬೆಳವಣಿಗೆಗೆ ಸಾಕಷ್ಟು ಅನುಕೂಲಕರವಾಗಿದೆ ಎನ್ನುತ್ತಾರೆ ರೈತರು.
ಮಳೆ ವಿವರ: ತಾಲೂಕಿನಲ್ಲಿ ಮಂಗಳವಾರ ಬಿದ್ದ ಜಿಟಿಜಿಟಿ ಮಳೆಗೆ ಕಸಬಾ 10.2 ಮಿ.ಮೀ., ದೊಡ್ಡಮಗ್ಗೆ 5.0 ಮಿ.ಮೀ., ರಾಮನಾಥಪುರ 3.6 ಮಿ.ಮೀ., ಕೊಣನೂರು 5.6 ಮಿ.ಮೀ., ಬಸವಾಪಟ್ಟಣ 3.4 ಮಿ.ಮೀ., ಮಲ್ಲಿಪಟ್ಟಣ 7.3 ಮಿ.ಮೀ., ದೊಡ್ಡಬೆಮ್ಮತ್ತಿ 8.2 ಮಿ.ಮೀ. ಸುರಿದಿರುವುದು ದಾಖಲಾಗಿದೆ.