

ಬೇಲೂರು : ತಾಲೂಕಿನಾದ್ಯಂತ ಶುಕ್ರವಾರ ಸುರಿದ ಧಾರಾಕಾರ ಮಳೆಯಿಂದಾಗಿ ಬೇಲೂರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಜನ ಜೀವನ ಅಸ್ತವ್ಯಸ್ತವಾಗಿತ್ತು. ಶಾಲಾ, ಕಾಲೇಜುಗಳಿಗೆ ತೆರಳುತಿದ್ದ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಪರದಾಡುವಂತಾಗಿತ್ತು.
ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ನಡು ನಡುವೆ ಒಂದೆರಡು ತಾಸು ಮಳೆ ಬಿಡುವು ನೀಡುತ್ತಲಿದ್ದು, ರೈತರು ಜಮೀನಿನತ್ತ ಮುಖ ಮಾಡಿ ಕೃಷಿ ಚಟುವಟಿಕೆಯಲ್ಲಿ ತೊಡಗಲು ಸಹಕಾರಿಯಾಗಿದೆ.
ಶ್ರಾವಣ ಮಾಸದ ಮೊದಲ ದಿನ ಶುಕ್ರವಾರ ಬೆಳಗ್ಗೆಯಿಂದಲೇ ಪ್ರಾರಂಭವಾದ ಮಳೆ ನಿರಂತರವಾಗಿ ಮದ್ಯಾಹ್ನದವರೆಗೂ ಸಿರಿದ ಕಾರಣ ಪಟ್ಟಣದ ರಸ್ತೆಗಳ ಮೇಲೆ ನೀರು ಹರಿಯುತ್ತಿತ್ತು. ಬೇಲೂರಿಗೆ ವಿವಿಧ ಕೆಲಸ, ಕಾರ್ಯಗಳಿಗೆ ಆಗಮಿಸಿದ್ದ ಗ್ರಾಮೀಣ ಭಾಗದ ಜನರು, ಮಳೆಯ ನಡುವೆಯೇ ನೆನೆದುಕೊಂಡು ವಹಿವಾಟು ನಡೆಸಿದರು. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹೈರಾಣಾದರು. ಕೆಲ ವಿದ್ಯಾರ್ಥಿಗಳು ಅಂಗಡಿ, ಮುಂಗಟ್ಟುಗಳ ಆವರಣದಲ್ಲೇ ನಿಂತಿದ್ದರು. ಕಾರ್ಮಿಕರು ಮಳೆಯಲ್ಲಿ ನೆನೆದುಕೊಂಡೇ ಹೋಗುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು. ಪರ ಊರುಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಬರಲು ಹಲವರು ಪರದಾಡಿದರು. ಜನ ಸಂಚಾರ ವಿರಳವಾದ ಕಾರಣ ಪಟ್ಟಣದಲ್ಲಿ ವ್ಯಾಪಾರ- ವಹಿವಾಟು ನೀರಸವಾಗಿತ್ತು.
ಕೆರೆಗಳಿಗೆ ಜಲ: ಧಾರಾಕಾರ ಮಳೆಯಿಂದ ತಾಲೂಕಿನ ಕೆರೆ ಕಟ್ಟೆಗಳಿಗೆ ಸಮೃದ್ಧ ನೀರು ಹರಿದು ಬರುತ್ತಿದೆ. ವರ್ಷಧಾರೆಯಿಂದ ಯಾವುದೇ ಅನಾಹುತ ತಾಲೂಕಿನಲ್ಲಿ ಸಂಭವಿಸಿಲ್ಲ. ಆದರೂ ತಗ್ಗು ಪ್ರದೇಶದ ಜನರು ಸ್ವಯಂ ಮುಂಜಾಗ್ರತೆ ವಹಿಸಲು ಜಿಲ್ಲಾಡಳಿತ ಸೂಚಿಸಿದೆ.