

ರಾಮದುರ್ಗ: ‘ಸೋರುತಿಹುದು ಮನೆಯ ಮಾಳಿಗೆ ಯಾರು ಗಟ್ಟಿ ಮಾಳ್ಪರಿಲ್ಲದೆ’ ಎಂಬ ಪುರಂದರ ದಾಸರ ಹಾಡನ್ನು ಜಿಲ್ಲೆ ಹಾಗೂ ತಾಲೂಕಿನಲ್ಲಿ ಕೆಲ ದಿನಗಳಿಂದ ಬಿಟ್ಟುಬಿಡದೇ ಸುರಿಯುತ್ತಿರುವ ಮಳೆ ನೆನಪಿಸುತ್ತಿದೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಮದುರ್ಗ ತಾಲೂಕಿನ ಜನರು ಇನ್ನಿಲ್ಲದ ಸಮಸ್ಯೆಗೆ ಸಿಲುಕುವಂತಾಗಿದೆ. ಗ್ರಾಮೀಣ ಭಾಗಗಳಲ್ಲಿ ಕಟ್ಟಿಗೆ ಹಾಗೂ ಮಣ್ಣಿನಿಂದ ನಿರ್ಮಿಸಿದ ಮನೆಗಳಿಗೆ ನೇರವಾಗಿ ಮಳೆರಾಯ ಪದಾರ್ಪಣೆ ಮಾಡುತ್ತಿದ್ದಾನೆ. ಮಳೆಯ ರುದ್ರನರ್ತನಕ್ಕೆ ಕೆಲ ಮನೆಗಳು ಕುಸಿಯುವ ಹಂತಕ್ಕೆ ತಲುಪಿವೆ. ಜನರು ದೇವಸ್ಥಾನ, ಸರ್ಕಾರಿ ಭವನಗಳತ್ತ ಮುಖಮಾಡುತ್ತಿದ್ದಾರೆ.
ತಾಲೂಕಿನ ಭಾಗಶಃ ಜಮೀನು ಮಲಪ್ರಭಾ ನದಿ ಪ್ರವಾಹಕ್ಕೆ ತುತ್ತಾಗಿ ಹಾನಿಯಾದರೆ, ಮಳೆಯಾಶ್ರಿತ ಪ್ರದೇಶಗಳಲ್ಲಿ ಅತಿಯಾದ ಮಳೆಯಿಂದ ಬೆಳೆಗಳು ನೆಲಕಚ್ಚಿವೆ. ಪ್ರಕೃತಿಯ ಮುನಿಸಿಗೆ ಅನ್ನದಾತ ಅಕ್ಷರಶಃ ನೊಂದುಹೋಗಿದ್ದಾನೆ. ಕೀಟ ಬಾಧೆಗೆ ತುತ್ತಾದ ಹತ್ತಿ: ಮಳೆ, ಹವಾಮಾನ ವೈಪರೀತ್ಯದಿಂದಾಗಿ ಹತ್ತಿ ಬೆಳೆ ಕೀಟದ ಬಾಧೆಗೆ ತುತ್ತಾಗಿ ನಾಶವಾಗುವ ಹಂತ ತಲುಪಿದೆ. ಬಾಕಿ ಹತ್ತಿಯ ಕಾಯಿಗಳನ್ನು ಬಿಸಿಲಿನಲ್ಲಿ ಒಡೆದು ಹತ್ತಿ ಪಡೆದುಕೊಳ್ಳಬೇಕೆಂಬ ರೈತರ ಆಸೆ, ಆಸೆಯಾಗಿಯೇ ಉಳಿದಿದೆ.
ಕಳೆದ ವರ್ಷ ಸುರಿದ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿ ಅನುಭವಿಸಿದವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಸಾಲ ಮಾಡಿ ಜೀವನ ನಡೆಸುತ್ತಿದ್ದೇವೆ. ಈಗ ಮತ್ತೆ ವರುಣ ತನ್ನ ಮುನಿಸು ಮುಂದುವರಿಸಿದ್ದಾನೆ. ಸರ್ಕಾರ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂದು ತಾಲೂಕಿನ ರೈತರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜಮೀನಿನಲ್ಲಿ ಕೊಳೆಯುತ್ತಿರುವ ಈರುಳ್ಳಿ: ರೋಗ ಬಾಧೆಗೆ ತುತ್ತಾದ ಕಾರಣ ಈ ಬಾರಿ ಈರುಳ್ಳಿ ಇಳವರಿ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿತ್ತು. ಬಾಕಿ ಈರುಳ್ಳಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಜೀವನ ನಡೆಸಬೇಕು ಎಂಬ ನಮ್ಮ ಆಸೆಗೆ ವರುಣ ಮಳೆಯ ರೂಪದಲ್ಲಿ ತಣ್ಣೀರು ಎರಚಿದ್ದಾನೆ. ಮಳೆಯಿಂದಾಗಿ ಹೆಚ್ಚಿನ ಪ್ರಮಾಣದ ಈರುಳ್ಳಿ ಕೃಷಿಭೂಮಿಯಲ್ಲಿ ಕೊಳೆಯುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಮಳೆಯಿಂದಾಗಿ ಸಾಲ ಮಾಡಿ ಬೆಳೆದ ಕೃಷಿ ಹಾಳಾಗಿ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸಾಲಗಾರರು ಮನೆಗೆ ಬಂದು ಸಾಲ ಮರುಪಾವತಿಗೆ ಒತ್ತಾಯಿಸುತ್ತಿದ್ದಾರೆ. ಆದಾಯವಿಲ್ಲದೆ ಜೀವನ ನಿರ್ವಹಣೆ ಸವಾಲಾಗಿದೆ. |ಅಪ್ಪಣ್ಣ ಹಲಕಿ ಮುದೇನೂರ ಗ್ರಾಮಸ್ಥ
ಕಳೆದೆರಡು ದಿನಗಳಿಂದ ತಾಲೂಕಿನಲ್ಲಿ ಅತಿಯಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ವಿವಿಧ ಗ್ರಾಮಗಳ 8-10 ಮನೆಗಳು ಭಾಗಶಃ ಕುಸಿದಿವೆ. ಬೆಳೆ ನಾಶವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಅಗತ್ಯ ನೆರವು ಒದಗಿಸಲು ಕ್ರಮ ವಹಿಸಲಾಗುವುದು. ಬೆಳೆ ಹಾನಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಲಾಗುವುದು. | ಸೋಮಶೇಖರ ತಂಗೋಳ್ಳಿ ತಹಸೀಲ್ದಾರ್ ರಾಮದುರ್ಗ
| ಡಾ. ರೇವಣಸಿದ್ದಪ್ಪ ಕುಳ್ಳೂರ