

ದೇವದುರ್ಗ: ಪಟ್ಟಣದ ಹೊಸ ಬಸ್ ನಿಲ್ದಾಣ ಎರಡೇ ವರ್ಷದಲ್ಲಿ ಮಳೆಗೆ ತಟಗುಟ್ಟುತ್ತಿದ್ದು ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಸುಮಾರು ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಟಿ-ಆಕಾರದಲ್ಲಿ ನಿಲ್ದಾಣ ನಿರ್ಮಿಸಿದ್ದು ಮಳೆ ಬಂದಾಗ ಅಲ್ಪಸ್ವಲ್ಪ ಗಾಳಿ ಬೀಸಿದರೂ ನೀರು ಒಳನುಗ್ಗುತ್ತದೆ. ಅಲ್ಲದೆ ಎರಡೂ ಕಡೆ ಟಿನ್ ಶೆಡ್ ಹಾಕಿದ್ದು ಎಲ್ಲೆಂದರಲ್ಲಿ ಸೋರುತ್ತಿದೆ.
ಸುಮಾರು ಎಂಟು ಎಕರೆ ಜಾಗ ಪೈಕಿ ಅರ್ಧ ಜಾಗದಲ್ಲಿ ಬಸ್ ನಿಲ್ದಾಣ, ಇನ್ನರ್ಧ ಜಾಗದಲ್ಲಿ ಡಿಫೋ ನಿರ್ಮಿಸಲಾಗಿದೆ. ನಿಲ್ದಾಣ ನಿರ್ಮಾಣ ಕಾಮಗಾರಿ ಮೊದಲಿನಿಂದಲೂ ಆಮೆಗತಿಯಲ್ಲಿ ಸಾಗಿತ್ತು. ಕಟ್ಟಡ ನಿರ್ಮಾಣಕ್ಕೆ 3-4 ವರ್ಷ ತೆಗೆದುಕೊಳ್ಳಲಾಗಿತ್ತು. 2023ರಲ್ಲಿ ಗಬ್ಬೂರಿಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ವರ್ಚುವಲ್ ಆಗಿ ನಿಲ್ದಾಣ ಉದ್ಘಾಟಿಸಿದ್ದರು. ಅದರೆ, ಸಣ್ಣಪುಟ್ಟ ಕೆಲಸ ಈಗಲೂ ಬಾಕಿಯಿದೆ.
ಐದು ವರ್ಷಗಳ ಹಿಂದೆ ಬಸ್ ನಿಲ್ದಾಣ ನಿರ್ಮಾಣಕ್ಕೆ 1.4 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಬಳಿಕ 2.6 ಕೋಟಿ ನೀಡಲಾಯಿತು. ಆದರೂ ಕಾಮಗಾರಿಗೆ ವೇಗ ಸಿಕ್ಕಿರಲಿಲ್ಲ. ಕೆಲ ದಿನಗಳ ಹಿಂದೆ ನಿಲ್ದಾಣದಲ್ಲಿ ಟಿವಿ ಪರದೆ, ಹೆಚ್ಚುವರಿ ಆಸನ ವ್ಯವಸ್ಥೆ, ಸೀಲಿಂಗ್ ಫ್ಯಾನ್ ಹಾಕಲಾಗಿದೆ.
ಒಂದು ವರ್ಷದ ಹಿಂದೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಬಸ್ ನಿಲ್ದಾಣಕ್ಕೆ ಇದುವರೆಗೆ ಕಾಂಪೌಂಡ್ ನಿರ್ಮಿಸಿಲ್ಲ. ಬಸ್ ನಿಲ್ಲುವ ಕಡೆ ಮಾತ್ರ ಸಿಸಿ ರಸ್ತೆ ಮಾಡಿದ್ದು ಉಳಿದಕಡೆ ಹಾಗೇ ಬಿಡಲಾಗಿದೆ. ಅಲ್ಪಸ್ವಲ್ಪ ಮಳೆ ಬಂದರೂ ಎಲ್ಲೆಂದರಲ್ಲಿ ನೀರು ನಿಲ್ಲುತ್ತಿದೆ.
ಮಳೆ ಬಂದರೆ ನೀರು ಅರ್ಧ ನಿಲ್ದಾಣದ ಒಳಗೆ ನುಗ್ಗುತ್ತದೆ. ತಿಂಥಣಿ ಬ್ರಿಡ್ಜ್, ಜಾಲಹಳ್ಳಿ ಮಾರ್ಗದ ಬಸ್ ನಿಲ್ಲುವ ಜಾಗದಲ್ಲಿ ಮಳೆಗೆ ಟಿನ್‌ಶೆಡ್ ತಟಗುಟ್ಟುತ್ತಿದೆ. ನಿಲ್ದಾಣದ ನಾಮಫಲಕ ಹಾಕಿದ ಹಾಗೂ ಪ್ರವೇಶ ದ್ವಾರದಲ್ಲಿ ಪಿಒಪಿ ಕಿತ್ತುಹೋಗಿದೆ. ಜತೆಗೆ ರಾಯಚೂರು ಮಾರ್ಗದ ಬಸ್ ನಿಲ್ಲುವ ಜಾಗದಲ್ಲೂ ಮಳೆ ನೀರು ಬರುತ್ತಿದೆ. ಇದರಿಂದ ನಿಲ್ದಾಣದ ಒಳಗೆ ನೀರು ನುಗ್ಗುತ್ತಿದ್ದು ಪ್ರಯಾಣಿಕರು ಆಸನ ತೊಯ್ದು ನಿಂತುಕೊಂಡು ಬಸ್‌ಗಾಗಿ ಕಾಯಬೇಕಿದೆೆ. ಮಹಿಳೆಯರು, ಮಕ್ಕಳಿಗೆ ಆಶ್ರಯ ಪಡೆಯಲು ಸೂಕ್ತ ಜಾಗ ಇಲ್ಲದಂತಾಗಿದೆ.
ಡಿಪೋ ವ್ಯವಸ್ಥಾಪಕ, ದೇವದುರ್ಗರಾಮನಗೌಡಮಳೆ ಬಂದರೆ ಏನೂ ಆಗಲ್ಲ, ಗಾಳಿ ಬಿಟ್ಟರೆ ಕೆಲಕಡೆ ಮಾತ್ರ ನೀರು ನಿಲ್ದಾಣದ ಒಳಗೆ ಬರುತ್ತದೆ. ಸೋರುತ್ತಿರುವ ಬಗ್ಗೆ ಪರಿಶೀಲಿಸಿ ರಿಪೇರಿ ಮಾಡಲು ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಪ್ರವಾಸಿ ದ್ವಾರದಲ್ಲಿ ಮಳೆ ನೀರು ಸೋರುತ್ತಿದ್ದು, ಸರಿಪಡಿಸಲಾಗುವುದು. ಅಧ್ಯಕ್ಷ, ರೈತ ಸಂಘ, ದೇವದುರ್ಗಮರಿಲಿಂಗ ಪಾಟೀಲ್ ಗೌರಂಪೇಟೆಬಸ್ ನಿಲ್ದಾಣ ಕಟ್ಟಡ ಸಂಪೂರ್ಣ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಮಳೆ ಬಂದರೆ ಎರಡೂ ಕಡೆ ನೀರು ಒಳನುಗ್ಗುತ್ತದೆ. ಎಲ್ಲೆಂದಲ್ಲಿ ಸೋರುತ್ತಿದ್ದು ಮಳೆಯಲ್ಲಿಯೇ ಬಸ್‌ಗೆ ಕಾಯುವಂತಾಗಿದೆ. ಒಳಗೆ ಸಿಸಿ ರಸ್ತೆ ನಿರ್ಮಿಸಿಲ್ಲ. ಇದರಿಂದ ನೀರು ನಿಂತು ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ.