

ಲಕ್ಷ್ಮೇಶ್ವರ: ತಾಲೂಕಿನ ಯಳವತ್ತಿ, ಯತ್ನಳ್ಳಿ, ಮಾಡಳ್ಳಿ ಭಾಗದಲ್ಲಿ ಸೋಮವಾರ ಸಂಜೆ ಗಾಳಿ, ಗುಡುಗು-ಮಿಂಚು- ಸಿಡಿಲಿನೊಂದಿಗೆ ಮಳೆ ಸುರಿಯಿತು. ಮುಂಗಾರು ಪೂರ್ವ ಮಾಗಿ ಉಳುಮೆ ಮಾಡಿದ್ದ ರೈತರು ಬಿತ್ತನೆಗೆ ಜಮೀನು ಹದಗೊಳಿಸಲು ಮಳೆಗಾಗಿ ಕಾಯುತ್ತಿದ್ದರು. ಎರಡು ದಿನಗಳಿಂದ ಸುರಿದ ಮಳೆ ಕೃಷಿ ಚಟುವಟಿಕೆಗೆ ಉತ್ತೇಜನ ನೀಡಿದೆ. ನರೇಗಾ ಯೋಜನೆಯಡಿ ರೈತರ ಜಮೀನುಗಳಲ್ಲಿ ನಿರ್ಮಿಸಿದ ಬದುವುಗಳಲ್ಲಿ ನೀರು ಸಂಗ್ರಹವಾಗಿದೆ. ಜೋರು ಗಾಳಿಯಿಂದ ಅಲ್ಲಲ್ಲಿ ಮರಗಳು ಬಿದ್ದು ತಗಡಿನ ಶೆಡ್ಡುಗಳು ಹಾರಿಹೋಗಿವೆ. ಕೆಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಸುಡು ಬಿಸಿಲು, ರಾತ್ರಿ ಝಳದಿಂದ ಬಸವಳಿದಿರುವ ಜನತೆಗೆ ಈ ಮಳೆ ಕೊಂಚ ಸಮಾಧಾನ ತಂದಿದೆ. ಬಿತ್ತನೆಗೆ ಅನಕೂಲವಾಗಲಿದೆ ಎಂದು ಯಳವತ್ತಿ ರೈತರಾದ ಬಿ.ಬಿ. ಪಾಟೀಲ, ಡಿ.ಬಿ. ಡೊಳ್ಳಿನ, ಶಿವಯ್ಯ ಮಠಪತಿ, ಹನಮಂತಪ್ಪ ಚಿಂಚಲಿ ತಿಳಿಸಿದ್ದಾರೆ.