

ಹುಬ್ಬಳ್ಳಿ: ಕಳೆದ ಹಲವಾರು ದಿನಗಳಿಂದ ತಲೆದೋರಿದ್ದ ಬಿಲಿಸಿನ ತಾಪಕ್ಕೆ ಹುಬ್ಬಳ್ಳಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಬುಧವಾರ ಸಂಜೆ ಸುರಿದ ಮಳೆಯಿಂದಾಗಿ ತಂಪಾದ ವಾತಾವರಣ ನಿರ್ವಣಗೊಂಡಿತ್ತು.
ಬುಧವಾರ ಸಂಜೆ ಸುಮಾರು 7 ಗಂಟೆಗೆ ಪ್ರಾರಂಭಗೊಂಡ ಜಿಟಿಜಿಟಿ ಮಳೆ, ಅರ್ಧ ತಾಸಿಗೂ ಹೆಚ್ಚಿನ ಸಮಯ ಸುರಿಯಿತು. ಮಳೆ ಮಧ್ಯೆ ಆಗಾಗ ಗುಡುಗು, ಮಿಂಚುಗಳೂ ಕಾಣಿಸಿಕೊಂಡವು. ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರು, ಸುರಿಯುತ್ತಿದ್ದ ಮಳೆ ಮಧ್ಯೆಯೇ ತಿರುಗಾಡುತ್ತಿದ್ದ ದೃಶ್ಯ ಕಂಡುಬಂದಿತು.
ಮೋಡ ಕವಿದ ವಾತಾವರಣ ಕಾಣಿಸದೇ ಏಕಾಏಕಿ ಸುರಿದ ಮಳೆ ಜನರಲ್ಲಿ ಸಂತಸ ಮೂಡಿಸಿತ್ತು. ಬೈಕ್ ಸವಾರರು ಮಳೆಯಲ್ಲಿ ನೆನೆಯುತ್ತಲೇ ಸಂಚರಿಸುತ್ತಿದ್ದರು. ಮಾರುಕಟ್ಟೆಯಲ್ಲಿದ್ದ ಜನರು ಆಸರೆಗಾಗಿ ಅಕ್ಕಪಕ್ಕದ ಕಟ್ಟಡಗಳತ್ತ ತೆರಳಿದರು. ಹೊರವಲಯದ ಪ್ರದೇಶದ ಬಡಾವಣೆಗಳಲ್ಲಿ ಡಾಂಬರೀಕರಣ ಆಗದ ಕಾರಣ ರಸ್ತೆಗಳು ಕೆಸರುಮಯವಾಗಿದ್ದವು. ಪಾದಚಾರಿಗಳು ಹಾಗೂ ಬೈಕ್ ಸವಾರರು ಸಂಚರಿಸಲು ಕಷ್ಟಪಡುವಂತಾಗಿತ್ತು. ಕೆಲವೆಡೆ ಬೈಕ್ಗಳು ಸ್ಕಿಡ್ ಆಗುತ್ತಿದ್ದದ್ದು ಕಂಡುಬಂದಿತು.
ಬರಗಾಲದಿಂದ ಕಂಗೆಟ್ಟಿದ್ದ ರೈತರಲ್ಲಿ ಬುಧವಾರ ಸುರಿದ ಜಿಟಿಜಿಟಿ ಮಳೆ ಹೊಸ ಆಶಯ ಮೂಡಿಸಿದಂತೆ ಇತ್ತು. ಮುಂದಿನ ದಿನಗಳಲ್ಲಿ ಉತ್ತಮ ಮಳೆ ಸುರಿಯಬಹುದು ಎಂಬ ಆಶಯ ರೈತರಲ್ಲಿ ಮೂಡಿತ್ತು.
ಸಾಮಾನ್ಯವಾಗಿ ಹೋಳಿ ಹುಣ್ಣಿಮೆ ನಂತರ ಕಾಮದಹನ ಆದ ಕೆಲ ದಿನಗಳಲ್ಲಿಯೇ ಮಳೆ ಸುರಿಯುವುದು ವಾಡಿಕೆ. ತಡವಾಗಿಯಾದರೂ ಕೆಲವೇ ಸಮಯ ಸುರಿದ ಮಳೆ ವಾತಾವರಣವನ್ನು ತಂಪಾಗಿಸಿತ್ತು.