

ಬೆಳಗಾವಿ: ಜಿಲ್ಲೆಯಲ್ಲಿ ಮಳೆಯಬ್ಬರ ಮುಂದುವರಿದಿದ್ದು, ಶನಿವಾರ ರಾತ್ರಿಪೂರ್ತಿ ಸುರಿದ ಮಳೆ ಭಾನುವಾರ ಇಡೀ ದಿನವೂ ಧಾರಾಕಾರವಾಗಿ ಸುರಿಯಿತು.
ನಿರಂತರ ಮಳೆಗೆ ಖಾನಾಪುರ ತಾಲೂಕಿನಲ್ಲಿ ಈವರೆಗೆ 31 ಮನೆಗಳು ಬಿದ್ದಿವೆ. ಕೆಲವರು ಬಾಡಿಗೆ ಮನೆಯಲ್ಲಿದ್ದರೆ, ಕೆಲವರು ಸಂಬಂಧಿಕರ ಮನೆಯಲ್ಲಿದ್ದಾರೆ. ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಒಂದು ವಾರದಿಂದ 150ರಿಂದ 170 ಮಿ.ಮೀ. ಮಳೆಯಾಗುತ್ತಿದೆ. ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ ನದಿ ತೀರದ ಜಮೀನುಗಳಲ್ಲಿ ನೀರು ನುಗ್ಗಿ ಬೆಳೆಗಳು ಜಲಾವೃತಗೊಂಡಿವೆ. ಲೋಂಡಾ ಅರಣ್ಯ ವ್ಯಾಪ್ತಿಯ ಸಾತಾಳಿ ಮತ್ತು ಮಾಚಾಳಿ ಗ್ರಾಮಗಳ ಬಳಿಯ ಸೇತುವೆ ಮೇಲೆ ನಾಲ್ಕು ಅಡಿಗಳಷ್ಟು ನೀರು ಹರಿಯುತ್ತಿದೆ. ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳು ಮತ್ತು ನದಿಗಳನ್ನು ಸೇರುವ ಹಳ್ಳ-ಕೊಳ್ಳಗಳಲ್ಲಿ ಹೆಚ್ಚು ನೀರು ಹರಿಯುತ್ತಿದೆ. ಅರಣ್ಯ ಪ್ರದೇಶಗಳಲ್ಲಿ ವಾಸವಿರುವ ಜನಜೀವನ ಅಸ್ತವ್ಯಸ್ತವಾಗಿದೆ.
ಖಾನಾಪುರ ತಾಲೂಕಿನ ಜಾಂಬೋಟಿ-ಬೆಳಗಾವಿ ಸಂಪರ್ಕಿಸುವ ರಸ್ತೆ ರಾಷ್ಟ್ರೀಯ ಹೆದ್ದಾರಿ- 54ರ ಕುಸಮಳ್ಳಿ ಗ್ರಾಮದ ಬಳಿಯ ಸೇತುವೆ ಅಪಾಯದಂಚಿನಲ್ಲಿದೆ. ಜಾಂಬೋಟಿಯಿಂದ ಖಾನಾಪುರಕ್ಕೆ ಸಂಕರ್ಪ ಕಲ್ಪಿಸುವ (ರಾಜ್ಯ ಹೆದ್ದಾರಿ 31) ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಯಮಕನಮರಡಿ, ನಿಪ್ಪಾಣಿ, ಚಿಕ್ಕೋಡಿ ಹಾಗೂ ಗೋಕಾಕ ಭಾಗದ 10 ಸೇತುವೆಗಳು ಜಲಾವೃತವಾಗಿವೆ.
ವಾಡಿಕೆಗಿಂತ ಹೆಚ್ಚು ಮಳೆ: ಜಿಲ್ಲೆಯಲ್ಲಿ ಜೂನ್ 1ರಿಂದ ಈವರೆಗೆ 270 ಮಿಮೀ ಮಳೆಯಾಗಬೇಕಿತ್ತು. ಆದರೆ 367 ಮಿಮೀ ಮಳೆ ಸುರಿದಿದೆ. ಶೇ. 36 ಹೆಚ್ಚುವರಿಯಾಗಿ ಮಳೆ ಸುರಿದಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಹಿಡಕಲ್ ಜಲಾಶಯದಲ್ಲಿ ಈಗಾಗಲೇ 33.646 ಟಿಎಂಸಿ ನೀರು ಸಂಗ್ರಹಗೊಂಡಿದೆ. ಮಲಪ್ರಭಾ ಜಲಾಶಯದಲ್ಲಿ 17.220 ಟಿಎಂಸಿ ನೀರು ಸಂಗ್ರಹವಾಗಿದೆ. ಬೆಳಗಾವಿ ತಾಲೂಕಿನ ರಕ್ಕಸಕೊಪ್ಪ ಜಲಾಶಯ ಭರ್ತಿಯಾಗಿದೆ. ವಿವಿಧ ಗ್ರಾಮಗಳ ಸಂಪರ್ಕಿಸುವ ರಸ್ತೆಗಳ ಅಕ್ಕ-ಪಕ್ಕದ ಗದ್ದೆಗಳಲ್ಲಿ ನೀರು ಸಂಗ್ರಹವಾಗಿದೆ. ಬೆಳಗಾವಿ ತಾಲೂಕಿನ ಧಾಮನೆ ಸೇರಿ ಇತರ ಗ್ರಾಮಕ್ಕೆ ತೆರಳುವ ರಸ್ತೆ ಅಕ್ಕ-ಪಕ್ಕದ ಮನೆಗಳ ಸುತ್ತ ನೀರು ಆವರಿಸಿದೆ.