

ಲಕ್ಷೆ್ಮೕಶ್ವರ: ಪಟ್ಟಣ ಸೇರಿ ತಾಲೂಕಿನ ಬಹುತೇಕ ಕಡೆ ಬುಧವಾರ ಸಂಜೆ ಸುರಿದ ಮಳೆ ಅವಾಂತರ ಸೃಷ್ಟಿಸಿವೆ. ಪಟ್ಟಣದಲ್ಲಿ ಚರಂಡಿಗಳು ತುಂಬಿ ರಸ್ತೆ ಮೇಲೆ ಕೊಳಚೆ ನೀರು ಹರಿದು ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಸಮೀಪದ ಗೊಜನೂರ, ಅಕ್ಕಿಗುಂದ, ಬಟ್ಟೂರ ಸೇರಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಗುಡುಗು, ಸಿಡಿಲು ಆರ್ಭಟದೊಂದಿಗೆ ಜೋರಾಗಿ ಮಳೆ ಸುರಿದಿದ್ದು, ಅನೇಕ ಕಡೆಗಳಲ್ಲಿ ಮರಗಳು ಉರುಳಿವೆ. ವಿದ್ಯುತ್ ಕಂಬಗಳು ಮುರಿದು ಬಿದ್ದು ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಶೇಂಗಾ ಬೆಳೆ ನೀರಿನಲ್ಲಿ ನಿಲ್ಲುವಂತಾಗಿದೆ. ಅಬ್ಬರಿಸಿದ ಗಾಳಿ, ಮಳೆಗೆ ಗೊಜನೂರ ಗ್ರಾಮದಲ್ಲಿ ರಮೇಶ ದನದಮನಿ ಅವರ ಮನೆ ಮುಂದಿನ ಸಿರಸಲ ಗಿಡ ಮುರಿದು ರಸ್ತೆ ಮೇಲೆ ಬಿದ್ದು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು.
ಗ್ರಾಮದಲ್ಲಿ ಆರೇಳು ಮನೆಗಳ ತಗಡು ಗಾಳಿಗೆ ಹಾರಿ ಹೋಗಿವೆ. ಗ್ರಾಮದ ನಿರ್ಮಲಾ ಬಾಗವಾಡ ಅವರ ಮೇಲೆ ಶೆಡ್ ಬಿದ್ದು ಗಾಯಗೊಂಡಿದ್ದಾರೆ. ಗೊಜನೂರ ಗ್ರಾಮದಲ್ಲಿ ರಾಮಣ್ಣ ಪ್ರಧಾನಿ ಅವರ ದನದ ಕೊಟ್ಟಿಗೆಯ ತಗಡುಗಳು ಹಾರಿ ಹೋಗಿವೆ.
ತಾಲೂಕಿನ ಗೊಜನೂರ, ಯಳವತ್ತಿ, ಅಕ್ಕಿಗುಂದ, ಬಟ್ಟೂರ ಗ್ರಾಮಗಳಲ್ಲಿ ಆಲಿಕಲ್ಲು ಸಮೇತ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಪಟ್ಟಣ ಸೇರಿ ತಾಲೂಕಿನ ದೊಡ್ಡೂರ, ಹುಲ್ಲೂರ, ಸೂರಣಗಿ, ಆದ್ರಳ್ಳಿ, ಯತ್ನಳ್ಳಿ, ಅಕ್ಕಿಗುಂದ, ಬಾಲೆಹೊಸೂರ ಸೇರಿ ಅನೇಕ ಗ್ರಾಮ ಕಲ್ಪಿಸುವ ರಸ್ತೆಗಳು ಹಾಳಾಗಿವೆ.
ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವಷ್ಟು ವ್ಯವಧಾನವನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತೋರಿಸಬೇಕಿದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ.