

ಕೋಲಾರ: ಜಿಲ್ಲೆಯಲ್ಲಿ 2 ದಿನಗಳಿಂದ ಬಿಡುವು ನೀಡಿದ್ದ ಮಳೆ ಶನಿವಾರ ರಾತ್ರಿ ಗುಡುಗು, ಮಿಂಚಿನ ಸಮೇತ ಭರ್ಜರಿಯಾಗಿ ಸುರಿದಿದ್ದು, ಭಾನುವಾರ ಸಂಜೆ ಶ್ರೀನಿವಾಸಪುರ ಸೇರಿ ವಿವಿಧೆಡೆ ಆರ್ಭಟ ಮುಂದುವರಿದೆ.
ಶ್ರೀನಿವಾಸಪುರ ತಾಲೂಕಿನಲ್ಲಿ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆಯಿಂದಾಗಿ ಶ್ರೀನಿವಾಸಪುರ&ಚಿಂತಾಮಣಿ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಶನಿವಾರ 10 ಗಂಟೆಯ ನಂತರ ಪ್ರಾರಂಭವಾದ ಮಳೆ ಭಾನುವಾರದ ಬೆಳಗಿನ ಜಾವದ ತನಕವೂ ಗುಡುಗು ಮಿಂಚಿನ ಸಮೇತ ಆರ್ಭಟಿಸಿತು. ಸದ್ಯಕ್ಕೆ ಮಳೆಯಿಂದ ಜಿಲ್ಲೆಯಲ್ಲಿ ಇದುವರೆವಿಗೂ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ, ತರಕಾರಿ ಮತ್ತು ಹೂವು ಬೆಳೆಗಾರರಿಗೆ ನಷ್ಟ ಅನುಭವಿಸುವಂತಾಗಿದೆ. ಟೊಮ್ಯಾಟೊ ಮತ್ತು ಕೋಸು ಬೆಳೆಗಳಿಗೆ ತೇವಾಂಶ ಹೆಚ್ಚಾಗುತ್ತಿದ್ದು, ಮಚ್ಚೆ ರೋಗ, ತರಕಾರಿಗಳಿಗೆ ವಿವಿಧ ರೋಗಗಳು ಬರುತ್ತದೆಂಬ ಭೀತಿ ಎದುರಾಗಿದೆ.
ಬೀದಿಗೆ ಬಂದ ಹೂವು ಬೆಳೆಗಾರರು
ದಸರಾ ಬಳಿಕ ಹೂವಿನ ಬೆಲೆ ಮತ್ತೆ ಕುಸಿದಿದ್ದು, 30 ಕೆಜಿ ಸೇವಂತಿಗೆ 200 ರಿಂದ 300 ರೂ.ಗಳಿಗೆ ಮಾರಾಟವಾಗುತ್ತಿದ್ದು, ಈಗ ಹೂವು ಕಿತ್ತು ತರುವ ಕೂಲಿಯೂ ಸಿಗದಂತಾಗಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದವರು ಗುಣಮಟ್ಟ ಇಲ್ಲ ಎಂದು ವ್ಯಾಪಾರವಾಗದ ಹೂವು ಮತ್ತೆ ವಾಪಸ್ಸು ತಂದು ರೈತರು ರಸ್ತೆಗೆ ಸುರಿಯುವ ದುಸ್ಥಿತಿ ಎದುರಾಗಿದೆ.
ಉಚಿತವಾಗಿ ಹಂಚುತ್ತಿರುವ ಬೆಳೆಗಾರರು
ಇನ್ನು ಕೆಲ ಹೂವು ಬೆಳೆಗಾರರು ಮಾರುಕಟ್ಟೆಯಲ್ಲಿ ಮಾರಾಟವಾಗದ್ದರಿಂದ ಮನೆಗೂ ವಾಪಸ್ ತರದೆ ಕೋಲಾರ ನಗರದಲ್ಲಿ ಕೇಳಿದವರಿಗೆ ಉಚಿತವಾಗಿಯೇ ಕೊಟ್ಟು ಬರುತ್ತಿದ್ದಾರೆ. ಚೆಂಡು, ಮಲ್ಲಿಗೆ ಹೂವು ಕೇಳುವವರೇ ಇಲ್ಲ. ಕೀಳಲು ಬಂದಿರುವ ಹೂವು ತೋಟದಲ್ಲಿಯೇ ಬಿಟ್ಟರೆ ಹೂವಿನ ಗಿಡಕ್ಕೆ ತೊಂದರೆಯಾಗುತ್ತದೆ. ಮತ್ತೆ ಹೂವು ಬಿಡುವುದಿಲ್ಲ ಎಂದು ಕೂಲಿ ಇಲ್ಲದಿದ್ದರೂ ಪರವಾಗಿಲ್ಲ ಇರುವ ಹೂವನ್ನು ಕಿತ್ತು ಹಾಕಿದರೆ ಮತ್ತೆ ಮೊಗ್ಗು ಬಂದು ದೀಪಾವಳಿಗಾದರೂ ಬೆಲೆ ಬರಬಹುದೆಂದು ರೈತರು ತೋಟಗಳಲ್ಲಿ ಈಗ ಬೆಳೆದ ಹೂವು ಕಿತ್ತು ಉಚಿತವಾಗಿ ಹಂಚಲು ಮುಂದಾಗಿದ್ದಾರೆ.