

ಲಕ್ಷ್ಮೇಶ್ವರ: ಪಟ್ಟಣ ಸೇರಿ ತಾಲೂಕಿನ ಹಲವೆಡೆ ಗುರುವಾರ ಮಧ್ಯಾಹ್ನದಿಂದ ಜಿಟಿಜಿಟಿ ಮಳೆಯಾಗಿದೆ.
ಮುಂಗಾರಿನ ಪ್ರಮುಖ ಮಳೆಗಳು ಸಂಪೂರ್ಣ ಕೈಕೊಟ್ಟಿದ್ದರಿಂದ ಆತಂಕಕ್ಕೀಡಾಗಿದ್ದ ರೈತ ಸಮುದಾಯಕ್ಕೆ ಕೊಂಚ ನೆಮ್ಮದಿ ಮೂಡಿಸಿದೆ.
ಮಳೆಯಾಗುತ್ತದೆ ಎಂಬ ನಂಬಿಕೆಯಿಂದ ಬಿತ್ತಿದ್ದ ಒಂದಷ್ಟು ರೈತರು ನಿಟ್ಟುಸಿರು ಬಿಡುವಂತಾಗಿದೆ. ಇದೇ ರೀತಿ ನಾಲ್ಕೈದು ದಿನ ಮಳೆಯಾದರೆ ಮೊಳಕೆಯೊಡೆದ ಪೈರು ಮೇಲೇಳಲು ಅನುಕೂಲವಾಗುತ್ತದೆ ಎಂಬ ಭಾವನೆ ರೈತರಲ್ಲಿ ಮೂಡಿದೆ.
ಮಳೆಯಿಂದ ರಸ್ತೆಗಳು ಕೆಸರುಮಯವಾದವು. ಮಾರುಕಟ್ಟೆಗೆ ಬಂದಿದ್ದ ಗ್ರಾಮೀಣ ಭಾಗದ ಜನರು ಅದರಲ್ಲೂ ಮಹಿಳೆಯರು ಮಳೆಯ ನಡುವೆ ಬಸ್ ಕೊರತೆಯಿಂದ ಗಂಟೆಗಟ್ಟಲೇ ಬಸ್ ನಿಲ್ದಾಣದಲ್ಲಿ ಕಾದು ನಿಂತ ದೃಶ್ಯ ಕಂಡು ಬಂದಿತು. ಫ್ರೀ ಬಸ್‌ನಿಂದ ಪ್ರಯಾಣಿಕರಿಲ್ಲದೆ ಓಡದೇ ನಿಂತಿದ್ದ ಅಟೋ ರಿಕ್ಷಾದವರು ಒಂದಷ್ಟು ಕಮಾಯಿ ಮಾಡಿಕೊಂಡರು.