

ತುಮಕೂರು : ಜಿಲ್ಲೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಮಳೆ ಬೀಳಲಾರಂಭಿಸಿದ್ದು, ನದಿ, ಕೆರೆ, ಹಳ್ಳ, ಕೊಳ್ಳಗಳಿಗೆ ಜೀವ ಬಂದಿದೆ. ಜಿಲ್ಲಾ ಕೃಷಿ ಹವಾಮಾನ ಘಟಕ ನ.21ರವರೆಗೂ ಜಿಲ್ಲೆಯಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಸೋಮವಾರ ರಾತ್ರಿ ಕೊರಟಗೆರೆ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಸುರಿದಿದ್ದು, ಬಹುತೇಕ ಎಲ್ಲ ಕೆರೆಗಳ ಕೋಡಿ ಹರಿಯುತ್ತಿದೆ, ಮಾವತ್ತೂರಿನಲ್ಲಿ ಬರೋಬ್ಬರಿ 156ಮಿಮೀ ಮಳೆಯಾಗಿದೆ, ಕುಣಿಗಲ್ ತಾಲೂಕು ಮಾರ್ಕೋನಹಳ್ಳಿ 100 ಮಿಮೀ ಮಳೆಯಾಗಿದೆ.
ಕೊರಟಗೆರೆಯಲ್ಲಿ 86ಮಿಮೀ, ತುಂಬಾಡಿ 80.8ಮಿಮೀ, ಹೊಳವನಹಳ್ಳಿ 98.4, ಮಾವತ್ತೂರು 156ಮಿಮೀ, ಇರಕಸಂದ್ರ ಕಾಲನಿ 77ಮಿಮೀ, ಕೋಳಾಲ 30.2ಮಿಮೀ ಹಾಗೂ ತೋವಿನಕೆರೆಯಲ್ಲಿ 72.6ಮಿಮೀ ಜಿಲ್ಲೆಯಲ್ಲಿಯೇ ಗರಿಷ್ಟ ಮಳೆಯಾಗಿದೆ. ಕುಣಿಗಲ್‌ನಲ್ಲಿ 38ಮಿಮೀ, ಹುಲಿಯೂರುದುರ್ಗ 36, ಸಂತೆಪೇಟೆ 39.8, ಮಾರ್ಕೋನಹಳಳಿ 100.4, ಅಮೃತೂರು 83.5, ಕೆ.ವನಮಾಚನಹಳ್ಳಿ 71.2 ಹಾಗೂ ನಿಡಸಾಲೆಯಲ್ಲಿ 25.2ಮಿಮೀ ಮಳೆಯಾಗಿದೆ.
ಚಿಕ್ಕನಾಯಕಮಹಳ್ಳಿ ತಾಲೂಕು ಸಿಂಗದಹಳ್ಳಿಯಲ್ಲಿ 93ಮಿಮೀ, ಹುಳಿಯಾರು 33.2, ಬೋರನಕಣಿವೆ 10.4, ಮತಿಘಟ್ಟ 12.5, ದೊಡ್ಡಎಣ್ಣೆಗೆರೆ 3.4ಮಿಮೀ, ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿ 31ಮಿಮೀ, ಹಾಲ್ಕುರಿಕೆ 12.4, ಹೊನ್ನವಳ್ಳಿ 11.4, ಕಿಬ್ಬನಹಳ್ಳಿ 7.2ಮಿಮೀ ಮಳೆಯಾಗಿದ್ದು ಎಲ್ಲೆಡೆಯೂ ನೀರು ತುಂಬಿದೆ.
ಮಧುಗಿರಿಯಲ್ಲಿ 55ಮಿಮೀ, ಬಡುವನಹಳ್ಳಿ 20, ಬ್ಯಾಲ್ಯ 20.1, ಮಿಡಿಗೇಶಿ 5, ಕೊಡಿಗೇನಹಳ್ಳಿ 11.2ಮಿಮೀ ಮಳೆಯಾಗಿದೆ. ತುಮಕೂರು ನಗರದಲ್ಲಿ 38.6ಮಿಮೀ, ಹೆಬ್ಬೂರು 28, ಬೆಳ್ಳಾವಿ 23.6, ಹಿರೇಹಳ್ಳಿ 3 ಹಾಗೂ ನೆಲಹಾಳ್ ಸುತ್ತಮುತ್ತ 31.3ಮಿಮೀ ಮಳೆಯಾಗಿದ್ದು ಜನರು ಹರ್ಷಗೊಂಡಿದ್ದಾರೆ. ತುರುವೇಕೆರೆಯಲ್ಲಿ 47.8ಮಿಮೀ, ದಂಡಿನಶಿವರ 23.2, ಮಾಯಸಂದ್ರ 46.2, ದೆಬ್ಬೇಘಟ್ಟ 25 ಹಾಗೂ ಸಂಪಿಗೆಯಲಲಿ 18.2ಮಿಮೀ ಮಳೆಯಾಗಿದೆ. ಶಿರಾದಲ್ಲಿ 18.4, ಚಿಕ್ಕನಹಳ್ಳಿ 28, ಕಳ್ಳಂಬೆಳ್ಳ 13.2ಮಿಮೀ ಮಳೆಯಾಗಿದೆ. ಮದಲೂರು ಕೆರೆಯೂ ತುಂಬುವಷ್ಟು ಒಳಹರಿವು ಇದ್ದು ತಾಲೂಕಿನಲ್ಲಿ ಅಪರೂಪದ ವರ್ಷಧಾರೆ ಎನಿಸಿದೆ. ಪಾವಗಡ ತಾಲೂಕಿನ ಅರಸೀಕೆರೆಯಲ್ಲಿ 17.4 ಹಾಗೂ ವೈ.ಎನ್.ಹೊಸಕೋಟೆಯಲ್ಲಿ 12ಮಿಮೀ ಮಳೆಯಾಗಿದೆ.
20 ವರ್ಷದ ನಂತರ ತುಂಬಿದ ಜಯಮಂಗಲಿ ; ಮಧುಗಿರಿ : ಪುರವರ, ಕೊಡಿಗೇನಹಳ್ಳಿ ಭಾಗದ ಜೀವನದಿ ಜಯಮಂಗಲಿ, ಉತ್ತರ ಪಿನಾಕಿನಿ ನದಿಗಳು ಮೈದುಂಬಿ ಹರಿಯುತ್ತಿದ್ದು, ಬರಿದಾಗಿದ್ದ ಕೆರೆ-ಕಟ್ಟೆಗಳು ಭರ್ತಿಯಾಗಿವೆ.
ಕೊರಟಗೆರೆ, ಮಧುಗಿರಿ ಭಾಗದಲ್ಲಿ ಭಾರಿ ಮಳೆಯಾಗಿದ್ದು, 20 ವರ್ಷಗಳ ನಂತರ ಜಯಮಂಗಲಿ ನದಿ ತುಂಬಿ ಹರಿಯುತ್ತಿದೆ. ನದಿ ಹರಿಯುವುದನ್ನು ನೋಡಲು ಜನರು ಸಾಗರೋಪಾದಿಯಲ್ಲಿ ಜಮಾಯಿಸುತ್ತಿದ್ದಾರೆ. ದೇವರಾಯನದುರ್ಗದಲ್ಲಿ ಹುಟ್ಟುವ ಜಯಮಂಗಲಿ ನದಿಯು, ಊರ್ಡಿಗೆರೆ ಹೋಬಳಿ ಗ್ರಾಮೀಣ ಭಾಗಗಳ ಮೂಲಕ ಕೊರಟಗೆರೆಗೆ ಹರಿದು ತೀತಾ ಡ್ಯಾಂನಲ್ಲಿ ತುಂಬಿ ಪುರವರ, ಕೊಡಿಗೇನಹಳ್ಳಿ ಭಾಗಗಳ ಕೃಷಿಗೆ ನೆರವಾಗುತ್ತದೆ, ಅಲ್ಲದೆ ಮುಂದೆ ಹರಿದು ಸೀಮಾಂಧ್ರದ ಪಿನಾಕಿನಿ ಮುಖಾಂತರ ಸಮುದ್ರ ಸೇರುತ್ತದೆ.
ರಸ್ತೆಗೆ ಉರುಳಿದ ಬಂಡೆ : ತುಂಬಿರುವ ಕೆರೆ-ಕಟ್ಟೆಗಳು ರೈತರು ಮತ್ತು ಜನತೆಗೆ ಸಂತಸ ತಂದಿದ್ದು, ಅಷ್ಟೇ ಪಜೀತಿಯನ್ನೂ ಉಂಟು ಮಾಡಿದೆ. ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಮಧುಗಿರಿ, ಗೌರಿಬಿದನೂರು, ಹಿಂದೂಪುರ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಅಗಸರ ಹೊಳೆಯ ಸೇತುವೆಯ ರಸ್ತೆಯ ಇಕ್ಕೆಲ, ಚೋಳೇನಹಳ್ಳಿ ಕೆರೆಯ ನೀರು ಹರಿವಿನ ರಭಸಕ್ಕೆ ರಸ್ತೆ ಕುಸಿದಿದೆ. ಇದರಿಂದ ಈ ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಒಕ್ಕಲಿಗರ ಸಮುದಾಯ ಭವನದ ಸಮೀಪವಿರುವ ಪಂಚಮುಖಿ ಗಣಪತಿ ದೇವಸ್ಥಾನದ ಬಳಿ ಇರುವ ಆನಂದರಾಯನ ಗುಡ್ಡದಿಂದ ಬೃಹತ್ ಬಂಡೆ ಮುಖ್ಯ ರಸ್ತೆಯ ಪಕ್ಕಕ್ಕೆ ಉರುಳಿದ್ದು, ಬಸ್ ನಿಲ್ದಾಣಕ್ಕೆ ಹೋಗುವ ದಾರಿಯೂ ಸಂಪರ್ಕ ಕಡಿತಗೊಂಡಿದೆ.