ಮಳವಳ್ಳಿ ತಾಲೂಕಿನಲ್ಲಿ ರ್ಭಟಿಸಿದ ವರುಣ

11 mlv 1
ಮಳವಳ್ಳಿ ತಾಲೂಕಿನ ಶುಕ್ರವಾರ ರಾತ್ರಿ ಸುರಿದ ಮಳೆಯ ಅಬ್ಬರಕ್ಕೆ ಹಂಗ್ರಾಪುರ ಸಮೀಪದ ಹಳ್ಳದಲ್ಲಿ ನೀರು ಪ್ರವಾಹದಂತೆ ಹರಿದು ರೈತರ ಜಮೀನುಗಳಲ್ಲಿನ ಬೆಳೆಗಳು ಜಲಾವೃತಗೊಂಡಿರುವುದು.
Published on

ಮಳವಳ್ಳಿ: ಕಳೆದ ರಾತ್ರಿಯಿಡೀ ಸುರಿದ ಮಳೆಯಿಂದ ತಾಲೂಕಿನ ವಿವಿಧೆಡೆ ಹಳ್ಳ ಕೊಳ್ಳಗಳು ಪ್ರವಾಹ ರೀತಿಯಲ್ಲಿ ತುಂಬಿಹರಿದ ಪರಿಣಾಮ ನೂರಾರು ಎಕರೆ ಬೆಳೆ ಹಾನಿಯಾಗಿದೆ. ವಿದ್ಯುತ್ ಕಂಬಗಳು ಉರುಳಿರುವುದು ಸೇರಿದಂತೆ ಮನೆಗಳಿಗೆ ನೀರು ನುಗ್ಗಿ ಕುಟುಂಬಸ್ಥರು ಪರದಾಡುವಂತಾಗಿದೆ.

ಶುಕ್ರವಾರ ಸಂಜೆ ಎರಡು ಗಂಟೆಗೂ ಹೆಚ್ಚುಕಾಲ ತಾಲೂಕಿನಾದ್ಯಂತ ಮಳೆ ಸುರಿದಿದೆ. ಅಲ್ಲದೆ ರಾತ್ರಿ 10 ಗಂಟೆಯ ನಂತರ ವರುಣನ ಆರ್ಭಟ ಬೆಳಗಿನವೆಗೂ ಮುಂದುವರಿಯಿತು. ಮಿಕ್ಕೆರೆ, ಮಾರ್ಕಾಲು, ದೋರನಹಳ್ಳಿ ಕೆರೆಗಳು ತುಂಬಿ ಕೋಡಿ ಬಿದ್ದ ಪರಿಣಾಮ ಅಡುವಿನ ಹಳ್ಳದಲ್ಲಿ ಪ್ರವಾಹದಂತೆ ಹರಿದಿದೆ. ಇದರಿಂದ ಉಪ್ಪನಹಳ್ಳಿ, ನಂಜೇಗೌಡನದೊಡ್ಡಿ, ಹಂಗ್ರಾಪುರ, ಯಮದೂರು ಸೇರಿದಂತೆ ಹಳ್ಳದ ಸಮೀಪವಿರುವ ಗ್ರಾಮಗಳ ರೈತರ ನೂರಾರು ಎಕರೆ ಜಮೀನುಗಳಿಗೆ ನೀರು ನುಗ್ಗಿದೆ. ಇತ್ತೀಚೆಗಷ್ಟೆ ನಾಟಿ ಮಾಡಿದ್ದ ಗದ್ದೆಗಳು ನೀರಿನಲ್ಲಿ ಮುಳುಗಿದರೆ, ಬಾಳೆ, ಕಬ್ಬು, ಇತರೆ ಬೆಳೆಗಳು ಜಲಾವೃತಗೊಂಡು ಲಕ್ಷಾಂತ ರೂ. ಬೆಳೆ ಹಾನಿಯಾಗಿವೆ.

ರಾಗಿಬೊಮ್ಮನಹಳ್ಳಿಯಲ್ಲಿ ರೈತ ಬಸವಣ್ಣ ತಮ್ಮ ಜಮೀನಿಗೆ ತೆರಳಿದ್ದಾಗ ಮಳೆಯಿಂದ ಬಾಗಿದ್ದ ವಿದ್ಯುತ್ ಕಂಬದಲ್ಲಿನ ತಂತಿ ತಗುಲಿ ವಿದ್ಯುತ್ ಪ್ರವಹಿಸಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡಬೂಹಳ್ಳಿ ಗ್ರಾಮದ ನಡುವೆ ಹಾದು ಹೋಗಿರುವ ನಾಲೆಯಲ್ಲಿ ನೀರು ತುಂಬಿ ಹರಿದು, ನಾಲೆ ಪಕ್ಕದಲ್ಲಿರುವ ಹತ್ತಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಕಟುಂಬಸ್ಥರು ಪರದಾಡುವಂತಾಯಿತು.

ನಾಲೆಯ ಪಕ್ಕದಲ್ಲೇ ಇರುವ ಜಯಮ್ಮ, ವೀರತಪ್ಪ ಅವರ ಮನೆಗಳಿಗೆ ನೀರು ನುಗ್ಗಿದೆ. ಬಸವರಾಜು, ಗಿರೀಶ್, ಮಹದೇವಸ್ವಾಮಿ ಸೇರಿದಂತೆ ಹಲವರ ಮನೆಗಳನ್ನು ನೀರು ಸುತ್ತುವರಿದು ಕುಟುಂಬದವರು ಜಲ ದಿಗ್ಬಂದನಗೊಂಡು ರಾತ್ರಿ ಇಡೀ ನಿದ್ದೆ ಇಲ್ಲದೆ ದಿನ ದೂಡುವಂತಾಗಿತ್ತು. ಕಳಪೆ ಕಾಮಗಾರಿ ಮಾಡಿರುವುದರಿಂದ ಏರಿ ಬಿರುಕುಗೊಂಡು ನಾಲೆಯಲ್ಲಿ ನೀರು ತುಂಬಿ ಬಂದಾಗಲೆಲ್ಲ ನಮ್ಮ ಮನೆಗಳು ಜಲಾವೃತಗೊಳ್ಳುತ್ತಿವೆ. ತಡೆಗೋಡೆ ನಿರ್ಮಾಣಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಯಾರೊಬ್ಬರೂ ಇತ್ತ ಗಮನ ಹರಿಸುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನಲ್ಲಿ ಮಳೆಯ ಅಬ್ಬರಕ್ಕೆ ನೂರಾರು ವಿದ್ಯುತ್ ಕಂಬಗಳು ಉರುಳಿ ನೆಲಕಚ್ಚಿದ್ದರಿಂದ ಹಲವು ಗ್ರಾಮಗಳಿಗೆ ಶನಿವಾರ ಸಂಜೆಯ ವರೆಗೂ ವಿದ್ಯುತ್ ಕಡಿತಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net