

ಶ್ರೀರಂಗಪಟ್ಟಣ: ಪುರಾತನ ಸಿಡಿಎಸ್(ಚಿಕ್ಕದೇವರಾಯ ಸಾಗರ)ನಾಲೆ ಏರಿಯ ಮಣ್ಣು ಕುಸಿದು ನಾಲೆಯ ನೀರು ಹೊರಹರಿದ ಪರಿಣಾಮ ನೂರಾರು ಎಕರೆ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳು ನಾಶವಾಗುವ ಜತೆಗೆ ಫಲವತ್ತಾದ ಮಣ್ಣು ಕೊಚ್ಚಿಹೋಗಿದೆ.
ತಾಲೂಕಿನ ದರಗುಪ್ಪೆ ಗ್ರಾಮ ಸಮೀಪದ ಸಿಡಿಎಸ್ ನಾಲೆಯ 26.5 ಮೈಲಿಗಲ್ಲಿನ ತೂಬಿನ ಬಳಿ ನಾಲೆಯ ಏರಿ ಶುಕ್ರವಾರ ಮುಂಜಾನೆ 2.30ರ ವೇಳೆ 1.5 ಮೀಟರ್ ಉದ್ದದಷ್ಟು ಕುಸಿದ ಪರಿಣಾಮ ನಾಲೆಯ ಕೆಳಭಾಗದಲ್ಲಿದ್ದ ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮದ ರೈತರ ಕೃಷಿ ಜಮೀನು ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಕೂಡಲಕುಪ್ಪೆ ಗ್ರಾಮದ ಎರಮಣೆ ನಾಲೆ, ಅಡ್ಡಹಳ್ಳ ಪಕ್ಕದ ರೈತರ ನೂರಾರು ಎಕರೆ ಕೃಷಿ ಭೂಮಿಗೆ ಪ್ರವಾಹದ ನೀರು ನುಗ್ಗಿ ಹರಿದು ಅಡಿಕೆ, ತೆಂಗು, ಬಾಳೆ, ಜೋಳ, ಭತ್ತ ಹಾಗೂ ಕಬ್ಬು ಸೇರಿದಂತೆ ಇತರೆ ಬೆಳೆಗಳನ್ನು ಸಂಪೂರ್ಣ ನಾಶಮಾಡುವ ಜತೆಗೆ ಫಲವತ್ತಾದ ಮಣ್ಣು ಸಹ ಕೊಚ್ಚಿಹೋಗಿದೆ.
ಕಳೆದ ಎರಡು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಸಿಡಿಎಸ್ ನಾಲೆಯಲ್ಲಿ ಕಾವೇರಿ ನೀರಿನ ಜತೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿದು ಬಂದ ಮಳೆ ನೀರು ಸೇರಿ ನಾಲೆಯೊಳಗೆ ನೀರು ಉಕ್ಕಿ ಹರಿದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ವೇಳೆ ಸ್ಥಳದಲ್ಲಿ ಜಮಾಯಿಸಿದ್ದ ಎರಡು ತಾಲೂಕಿನ ರೈತರು ಅಪಾರ ಮೌಲ್ಯದ ಬೆಳೆ ನಾಶವಾಗುತ್ತಿರುವುದನ್ನು ಕಂಡು ಕಂಗಾಲಾಗಿದ್ದಾರೆ. ನೀರಾವರಿ ನಿಗಮದ ಅಧಿಕಾರಿಗಳು ಶಿಥಿಲಗೊಂಡಿರುವ ನಾಲೆಯ ಏರಿಯನ್ನು ಸರಿಯಾದ ಕ್ರಮ ವಹಿಸಿ ದುರಸ್ತಿಗೊಳಿಸದ ಹಿನ್ನೆಲೆಯಲ್ಲಿ ಈ ಅವ್ಯವಸ್ಥೆ ಉಂಟಾಗಿದೆ ಎಂದು ಆರೋಪಿಸಿದರು.