

ತುಮಕೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ನಗರ ಸೇರಿ ಜಿಲ್ಲೆಯಾದ್ಯಂತ ಗುರುವಾರ ಬೆಳಗ್ಗೆ ಆರಂಭವಾದ ಸೋನೆ ಮಳೆ ಇಡೀ ದಿನ ಸುರಿಯಿತು.
ಸೂರ್ಯ ಮೋಡದೊಳಗೆ ಸೇರಿದ್ದರಿಂದ ಬಿಸಿಲು ಕಾಣಲಿಲ್ಲ. ಮಲೆನಾಡು ನೆನಪಿಸುವಂತಿದ್ದ ವಾತಾವರಣದಲ್ಲೇ ಶಾಲಾ-ಕಾಲೇಜು ವಿದ್ಯಾರ್ಥಿಗಳು ನೆನೆಯುತ್ತಿದ್ದ ದೃಶ್ಯ ಕಂಡುಬಂತು. ದ್ವಿಚಕ್ರವಾಹನ ಸವಾರರು ರೈನ್ ಕೋಟ್‌ಗೆ ಮೊರೆ ಹೋದರೆ, ಬಹಳ ದಿನಗಳಿಂದ ಗೂಡು ಸೇರಿದ್ದ ಬಣ್ಣಬಣ್ಣದ ಸ್ಪೆಟರ್, ಮಫ್ಲರ್, ಜರ್ಕಿನ್‌ಗಳಿಗೆ ಮಳೆ-ಚಳಿಗೆ ಮೈಯೊಡ್ಡುವ ಅವಕಾಶ ದೊರೆಯಿತು.
ಎಲ್ಲ ತಾಲೂಕುಗಳಲ್ಲೂ ಸೋನೆ ಮಳೆಯಾಗುತ್ತಿದ್ದು ತೆನೆಕಟ್ಟಿದ್ದ ರಾಗಿ ಬಾಗಿವೆ. ಕೊರೆವ ಚಳಿ ಜತೆಗೆ ಮಳೆಯಲ್ಲಿ ಮಕ್ಕಳು ಪಾಲಕರೊಂದಿಗೆ ಛತ್ರಿ ಆಶ್ರಯದಲ್ಲಿ ಸುರಿಯುವ ಮಳೆಯಲ್ಲೂ ಶಾಲೆಗಳಿಗೆ ತೆರಳುತ್ತಿದ್ದ ದೃಶ್ಯ ಕಂಡುಬಂತು.
ಮಳೆ ಕಿರಿಕಿರಿ: ಇನ್ನು ದಿನನಿತ್ಯದ ಕೆಲಸ ಕಾರ್ಯಗಳಿಗೆ ತೆರಳುವ ಸರ್ಕಾರಿ ನೌಕರರು, ಖಾಸಗಿ ಕಂಪನಿಗಳ ನೌಕರರು, ಕೂಲಿ ಕಾರ್ಮಿಕರು ಕಿರಿಕಿರಿ ಅನುಭವಿಸುವಂತಾಯಿತು. ಬೇರೆ ಬೇರೆ ಊರುಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಪ್ರಯಾಣಿಕರಂತೂ ಚಳಿ, ಮಳೆಯಲ್ಲೇ ನೆನೆದು ಬಸ್ ಹತ್ತಲು ಪರದಾಡುತ್ತಿದ್ದ ದೃಶ್ಯಗಳು ಕಂಡು ಬಂದವು.
ಕಟಾವಿಗೆ ಬಂದಿರುವ ರಾಗಿ: ಗ್ರಾಮೀಣ ಪ್ರದೇಶದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. 3-4 ತಿಂಗಳಿಂದ ಕಷ್ಟಪಟ್ಟು ರಾಗಿ ಕೃಷಿ ಮಾಡಿದ್ದು, ಇನ್ನೇನು ರಾಗಿ ಹೊಲಗಳು ಕಟಾವಿಗೆ ಬರುವ ಹೊತ್ತಿಗೆ ವಾಯುಭಾರ ಕುಸಿತದಿಂದ ಒಂದೇ ಸಮನೆ ಮಳೆ ಸುರಿಯುತ್ತಿರುವುದು ರೈತ ಸಮೂಹಕ್ಕೆ ನುಂಗಲಾರದ ಬಿಸಿತುತ್ತಾಗಿ ಪರಿಣಮಿಸಿದೆ. ಎರಡನೇ ದಿನವೂ ಮಳೆ ಮುಂದುವರಿದರೆ ರಾಗಿ ಫಸಲು ನಷ್ಟವಾಗಬಹುದೆಂಬುದು ಕೃಷಿ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಜಿಲ್ಲೆಯಲ್ಲಿ ಶೇ.96 ರಾಗಿ ಬಿತ್ತನೆ ಮಾಡಲಾಗಿದೆ. ಕೆಲವು ಕಡೆ ಬೇಗನೆ ಬಿತ್ತನೆ ಮಾಡಲಾಗಿದ್ದು ಅಂತಹ ಹೊಲಗಳಲ್ಲಿ ರಾಗಿ ತೆನೆಕಟ್ಟಿದೆ. ಅಕ್ಬೋಬರ್‌ನಲ್ಲಿ ಬಿದ್ದ ಉತ್ತಮ ಮಳೆಯಿಂದ ತಡವಾಗಿ ಬಿತ್ತನೆ ಮಾಡಿರುವ ರಾಗಿಯಿಂದ ಉತ್ತಮ ಫಸಲು ನಿರೀಕ್ಷೆ ಇದೆ. ಒಂದೇ ದಿನಕ್ಕೆ ರಾಗಿ ನಷ್ಟವಾಗುವ ಸಾಧ್ಯತೆ ಕಡಿಮೆ. ರಾಜಸುಲೋಚನಾ ಜಂಟಿ ನಿರ್ದೇಶಕಿ, ಕೃಷಿ ಇಲಾಖೆ