ಇಡೀ ರಾತ್ರಿ ಸುರಿದ ಮಳೆಗೆ ಮದ್ದೂರು ತತ್ತರ

1003093893
ನಿಲುವಾಗಿಲು ಗ್ರಾಮದಲ್ಲಿ ಗುರುವಾರ ರಾತ್ರಿ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದರು.
Published on

ಮದ್ದೂರು: ತಾಲೂಕಿನ ವಿವಿಧೆಡೆ ಗುರುವಾರ ಇಡೀ ರಾತ್ರಿ ಸುರಿದ ಕುಂಭದ್ರೋಣ ಮಳೆ ಹಲವಾರು ಅವಾಂತರಗಳನ್ನು ಸೃಷ್ಟಿಸಿದೆ.

ನಿಲುವಾಗಿಲು ಗ್ರಾಮದ ಕೆರೆ ಕೋಡಿ ಬಿದ್ದು ನಾಲೆಯಲ್ಲಿ ತ್ಯಾಜ್ಯ ತುಂಬಿದ ಪರಿಣಾಮ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ 15ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ಪರಿಣಾಮ, ಜನರು ರಾತ್ರಿಯಿಡೀ ಜಾಗರಣೆ ಮಾಡಿ ದವಸ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳನ್ನು ಸಂರಕ್ಷಿಸಿಕೊಂಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮದ್ದೂರು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಗ್ರಾಮಸ್ಥರ ಸಮಸ್ಯೆ ಆಲಿಸಿದರು. ನಾಲೆಗಳಲ್ಲಿರುವ ತ್ಯಾಜ್ಯವನ್ನು ಸ್ವಚ್ಛತೆ ಮಾಡದ ಪರಿಣಾಮ ಮನೆಗಳಿಗೆ ನೀರು ನುಗ್ಗಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಯೇ ನೇರ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದರು.

ತಕ್ಷಣವೇ ಎಚ್ಚೆತ್ತುಕೊಂಡ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ನಿಲುವಾಗಿಲು ಗ್ರಾಮ ಪಂಚಾಯಿತಿ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿ ನಾಲೆಗಳಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯದ ರಾಶಿ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಯಿತು. ಇನ್ನು ಮುಂದೆ ಈ ರೀತಿ ತೊಂದರೆಯಾಗಬಾರದು. ನೀರು ನಾಲೆಗಳಲ್ಲಿ ಸರಾಗವಾಗಿ ಹರಿಯುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಮನೆಗಳಿಗೆ ನೀರು ನುಗ್ಗಿರುವ ನಿವಾಸಿಗಳಿಗೆ ನಿಲುವಾಗಿಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾತ್ಕಾಲಿಕವಾಗಿ ಗಂಜಿ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ ಎಂದರು.

ತಾಲೂಕಿನ ಹಲವೆಡೆ ಇನ್ನು ಎರಡು ಮೂರು ದಿನಗಳ ಕಾಲ ಮಳೆಯ ಪ್ರಮಾಣ ಹೆಚ್ಚಾಗುವ ಸಂಭವವಿದೆ. ಹೀಗಾಗಿ ಜನರು ಶಿಥಿಲಗೊಂಡಿರುವ ಮನೆಗಳಲ್ಲಿ ವಾಸಿಸದೆ ಸುರಕ್ಷಿತ ಸ್ಥಳಗಳಲ್ಲಿರುವಂತೆ ಮನವಿ ಮಾಡಿದರು. ಗುರುವಾರ ಬಿದ್ದಿರುವ ಮಳೆಯಿಂದ ತಾಲೂಕಿನ ಕೆಲವೆಡೆ ಮನೆ, ಬೆಳೆಗಳು ಜಲಾವೃತಗೊಂಡು ಸಾಕಷ್ಟು ನಷ್ಟ ಉಂಟಾಗಿದೆ. ಈಗಾಗಲೇ ಗ್ರಾಮ ಆಡಳಿತಾಧಿಕಾರಿಗಳು ಸಮೀಕ್ಷೆ ಕೂಡ ನಡೆಸುತ್ತಿದ್ದು , ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ನಿಧಿಯ ಅನ್ವಯ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಭಾರಿ ಮಳೆಯಿಂದಾಗಿ ಕೆಸ್ತೂರು ಪೊಲೀಸ್ ಠಾಣಾ ಆವರಣಕ್ಕೆ ಮಳೆ ನೀರು ನುಗ್ಗಿದೆ. ಪ್ರತಿ ಮಳೆಗಾಲದಲ್ಲೂ ಕೆಸ್ತೂರು ಪೊಲೀಸ್ ಠಾಣಾ ಆವರಣ ಜಲಾವೃತವಾಗುತ್ತದೆ. ಮದ್ದೂರು-ತುಮಕೂರು ರಾಜ್ಯ ಹೆದ್ದಾರಿಯ ನೀರು ಹಾಗೂ ಗ್ರಾಮದ ಚರಂಡಿ ನೀರೆಲ್ಲ ಪೊಲೀಸ್ ಠಾಣೆಯ ರಸ್ತೆಯ ಚರಂಡಿಗೆ ಬಿಡುವ ಪರಿಣಾಮ ಈ ಸಮಸ್ಯೆ ಉಂಟಾಗುತ್ತಿದೆ. ಕುಂಭದ್ರೋಣ ಮಳೆಗೆ ತಾಲೂಕಿನ ಜೀವನಾಡಿ ಶಿಂಷಾ ನದಿ ಉಕ್ಕಿ ಹರಿಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net