

ಮಡಿಕೇರಿ:
ಜಿಲ್ಲೆಯಲ್ಲಿ ಪುಷ್ಯ ಮಳೆಯ ರಭಸ ಜೋರಾಗಿದೆ. ಕೊಡಗಿನಾದ್ಯಂತ ಉತ್ತಮ ಮಳೆ ಆಗುತ್ತಿದೆ. ಗಾಳಿ ಸಹಿತ ಸುರಿಯುತ್ತಿರುವ ಮಳೆ ಆತಂಕಕ್ಕೆ ಕಾರಣವಾಗಿದೆ. ಅಲ್ಲಲ್ಲಿ ಮರ ಬಿದ್ದು ಸಮಸ್ಯೆ ಆಗಿದೆ. ಸೋಮವಾರಪೇಟೆಯಲ್ಲಿ ಮನೆಯ ಗೋಡೆ ಕುಸಿದು ಕಲ್ಬುರ್ಗಿ ಮೂಲದ ಸುಷ್ಮಾ ಎಂಬವರು ದುರ್ಮರಣಕ್ಕೀಡಾಗಿದ್ದಾರೆ. ಭಾಗಮಂಡಲ ತ್ರಿವೇಣಿ ಸಂಗಮ ಸಂಪೂರ್ಣ ಭರ್ತಿ ಆಗಿದೆ. ಈ ಮಧ್ಯೆ ಕೊಡಗಿನಲ್ಲಿ ಭಾನುವಾರ ಬೆಳಗ್ಗೆ 8.30ರ ತನಕ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಅಮ್ಮತ್ತಿ ಹೋಬಳಿ ಬಿಳುಗುಂದ ಗ್ರಾಮದ ನಿವಾಸಿ ಹೆಚ್. ಟಿ. ಗಣೇಶ್ ಎಂಬವರ ವಾಸದ ಮನೆಯ ಹಿಂಬದಿಯ ಗೋಡೆ ಮತ್ತು ಛಾವಣಿ ಕುಸಿದು ಬಿದ್ದು ಮನೆಗೆ ಹಾನಿ ಆಗಿದೆ. ಕೆದಮಳ್ಳೂರು ಗ್ರಾಮದ ಚೂರಿಯಾಲದ ದೇವಸ್ಥಾನದ ಮೇಲೆ ಮರ ಬಿದ್ದು ದೇವಸ್ಥಾನದ ಸುಮಾರು ಅರ್ಧ ಭಾಗ ಹಾನಿಗೊಳಗಾಗಿದೆ. ಶನಿವಾರಸಂತೆ ಹೋಬಳಿ ಕೊರಲಳ್ಳಿ ಗ್ರಾಮದÀ ಸುಕನ್ಯಾ ಎಂಬವÀರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಮಡಿಕೇರಿ ತಾಲೂಕು ಸಂಪಾಜೆ ಹೋಬಳಿ ಮೇಕೇರಿ ಗ್ರಾಮದ ಸುಭಾಸ್ ನಗರz ನಸೀಮಾ ಎಂಬವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿ ಉಂಟಾಗಿದೆ. ನಾಪೋಕ್ಲು ಹೋಬಳಿ ಎಮ್ಮೆಮಾಡು ಗ್ರಾಮದ ಅಬ್ದುಲ್ ರಹೆಮಾನ್ ಎಂಬವರ ಮನೆಯ ಹಿಂಭಾಗದಲ್ಲಿ ಮರಬಿದ್ದು ಹಾನಿಯಾಗಿದೆ. ದೊಡ್ಡಕೂಡ್ಲಿ ಗ್ರಾಮದ ಕೃಷ್ಣಚಾರ್ಯ ಎಂಬುವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.
ಕುಶಾಲನಗರ ತಾಲೂಕು ಕುಶಾಲನಗರ ಹೋಬಳಿ ಕೂಡಿಗೆ ಗ್ರಾಮ ಪಂಚಾಯಿತಿಯ ಬ್ಯಾಡಗೊಟ್ಟ ಗ್ರಾಮದ ನಿವಾಸಿ ಪಾಂಡುರAಗ ಎಂಬವರ ಮನೆಗೆ ಮರ ಬಿದ್ದು ಮನೆಯ 2 ಶೀಟ್ ಹಾಗೂ ಮನೆಗೆ ಹೊಂದಿಕೊAಡAತೆ ಇರುವ ಕೊಟ್ಟಿಗೆ ಹಾನಿಯಾಗಿದೆ.
ಭಾಗಮಂಡಲ ಹೋಬಳಿ ಕರಿಕೆ ಗ್ರಾಮದ ಸುಮತಿ ಅವರ ವಾಸದ ಮನೆಯ ಮೇಲೆ ಮರ ಬಿದ್ದು ಶೀಟ್‌ಗಳು ಹಾನಿಯಾಗಿದೆ.
ನಾಪೋಕ್ಲು ಸಮೀಪದ ಕೋಕೇರಿ ಗ್ರಾಮದಲ್ಲಿ ಚಂಡಿರ ವಿಮಲಾ ಎಂಬವರ ಮನೆಯ ಒಂದು ಭಾಗ ಸಂಪೂರ್ಣ ಕುಸಿದು ಹಾನಿ ಉಂಟಾಗಿದೆ. ಮನೆಯಲಿದ್ದ ವಿಮಲಾ ಅದೃಷ್ಟವಶಾತ್ ಜೀವಾಪಾಯದಿಂದ ಪಾರಾಗಿದ್ದಾರೆ.
ಸುಂಟಿಕೊಪ್ಪ ಸಮೀಪದ ಬಾಳೆಕಾಡು ಬಳಿ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಭಾರಿ ಗಾಳಿ ಮಳೆಗೆ ಎರಡು ಮರಗಳು ಬಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸೋಮವಾರಪೇಟೆಯ ಕುಂಬೂರುವಿನಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾ ಮೇಲೆ ಮರ ಬಿದ್ದಿದೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 54.01 ಮಿಮೀ ಸರಾಸರಿ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 77.68, ವಿರಾಜಪೇಟೆ ತಾಲೂಕಿನಲ್ಲಿ 19.3 ಮಿಮೀ. ಸೋಮವಾರಪೇಟೆ ತಾಲೂಕಿನಲ್ಲಿ 102.85 ಮಿಮೀ, ಪೊನ್ನಂಪೇಟೆ ತಾಲೂಕಿನಲ್ಲಿ 57.54 ಹಾಗೂ ಕುಶಾಲನಗರ ತಾಲೂಕಿನಲ್ಲಿ 12.7 ಮಿಮೀ ಮಳೆಯಾಗಿದೆ. ಅತೀ ಹೆಚ್ಚು ಮಳೆ 205 ಮಿಮೀ ಶಾಂತಳ್ಳಿ ಹೋಬಳಿಯಲ್ಲಿ ದಾಖಲಾಗಿದೆ.
2859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ ಶನಿವಾರದ ಮಾಹಿತಿ ಪ್ರಕಾರ 2855.80 ಅಡಿ ನೀರಿದೆ. 9,292 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ನದಿಗೆ 9625 ಕ್ಯೂಸೆಕ್ ಮತ್ತು ನಾಲೆಗೆ 350 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.