

ಮಡಿಕೇರಿ:
ಕೊಡಗಿನ ಬಹುತೇಕ ಕಡೆಗಳಲ್ಲಿ ಗುರುವಾರ ಮಧ್ಯಾಹ್ನ ನಂತರ ಬಿರುಸು ಪಡೆದುಕೊಂಡು, ತಡರಾತ್ರಿ ತನಕ ಅಬ್ಬರಿಸಿದ್ದ ಮಳೆ ಶುಕ್ರವಾರ ಬೆಳಗ್ಗೆ ಸ್ವಲ್ಪ ಬಿಡುವು ತೆಗೆದುಕೊಂಡAತಿತ್ತು. ಆದರೆ ಮಧ್ಯಾಹ್ನ ನಂತರ ಮತ್ತೆ ಚುರುಕಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲೂ ಬಹುತೇಕ ಇದೇ ಸ್ಥಿತಿ ಇತ್ತು. ಆಗಾಗ್ಗೆ ಮಳೆ ಬಿಡುವು ತೆಗೆದುಕೊಂಡರೂ ನಗರದಲ್ಲಿ ಮಂಜು ಮುಸುಕಿದ ವಾತಾವರಣ ಕಂಡು ಬಂತು.
ಮಡಿಕೇರಿ, ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಹೆಚ್ಚಿನ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ಕೆಲವೆಡೆ ಮಳೆ ವಾತಾವರಣ ಕಂಡು ಬಂತು. ಕುಶಾಲನಗರ ಸುತ್ತಮುತ್ತಲು ಬೆಳಗ್ಗೆ ಬಿಸಿಲು ಇತ್ತು. ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಕಕ್ಕಬ್ಬೆ, ವಿರಾಜಪೇಟೆ, ಪೊನ್ನಂಪೇಟೆ, ಗೋಣಿಕೊಪ್ಪಲು, ಬಿರುನಾಣಿ, ಶ್ರೀಮಂಗಲ ವ್ಯಾಪ್ತಿಯಲ್ಲಿ ಜೋರಾಗಿ ಮಳೆ ಬಂದಿದೆ.
ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಹಾನಿ ಮುಂದುವರಿದಿದೆ. ನದಿಗಳಲ್ಲಿ ನೀರಿನ ಮಟ್ಟ ಏರಿಕೆ ಆಗುತ್ತಿದೆ. ಕುಶಾಲನಗರ ತಾಲೂಕು ನೆಲ್ಯಹುದಿಕೇರಿ ಗ್ರಾಮದಲ್ಲಿ ಕಾವೇರಿ ನದಿ ತೀರದ ಕುಂಬಾರಗುAಡಿ ಹೊಳೆಕೆರೆ ನಿವಾಸಿಯಾದ ಬೇಬಿ, ಅಕ್ಕಣ್ಣಿ ಎಂಬವರ ಗುಡಿಸಲಿಗೆ ಕಾವೇರಿ ನದಿ ನೀರು ಬಂದಿದೆ. ಇವರ ಕುಟುಂಬದವರನ್ನು ಸಂಬAಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.
ಶಾಂತಳ್ಳಿ ಹೋಬಳಿಯ ಕುಮಾರಳ್ಳಿ ಬಾಚಳ್ಳಿ ಗ್ರಾಮದ ಕುಂದಳ್ಳಿ - ಪುಷ್ಪಗಿರಿ ಸಂಪರ್ಕಿಸುವ ರಸ್ತೆಯ ಮೇಲೆ ಬರೆ ಕುಸಿದಿದ್ದು ಒಂದು ವಿದ್ಯುತ್ ಕಂಬ ಮುರಿದು ಹೋಗಿ ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಬಾಳೆಲೆ ಹೋಬಳಿಯ ಕೊಟ್ಟಗೇರಿ ಗ್ರಾಮದ ರಸ್ತೆ ಮಳೆಯಿಂದಾಗಿ ಜಲಾವೃತಗೊಂಡಿದ್ದು ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಈ ಗ್ರಾಮಕ್ಕೆ ತೆರಳಲು ಬದಲಿ ಸಂಪರ್ಕ ರಸ್ತೆಯ ವ್ಯವಸ್ಥೆ ಮಾಡಲಾಗಿದೆ. ನಿಟ್ಟೂರು ಗ್ರಾಮ ವ್ಯಾಪ್ತಿಯ ಚಿಣ್ಣರ ಹಾಡಿ ಸಂಪರ್ಕ ಸೇತುವೆ ಪಕ್ಕದಲ್ಲಿ ಬರೆ ಕುಸಿದಿದ್ದು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಸೋಮವಾರಪೇಟೆ ಪಟ್ಟಣದ ವಿಶ್ವ ಮಾನವ ವಿದ್ಯಾಸಂಸ್ಥೆಯ ಶಾಲಾ ಆವರಣದ ತಡೆಗೋಡೆ ಮಳೆಯಿಂದಾಗಿ ಕುಸಿದಿದೆ.
ಕಳೆದ 24 ಗಂಟೆ ಅವಧಿಯಲ್ಲಿ ಜಿಲೆಯಲ್ಲಿ ಸರಾಸರಿ 40.50 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 92.22 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1367.96 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 737.17 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 71.28 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 28.10 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 31.75 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 54.35 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 17 ಮಿ.ಮೀ. ಸರಾಸರಿ ಮಳೆಯಾಗಿದೆ.
ಜಿಲ್ಲೆಯಲ್ಲಿ ಶಾಂತಳ್ಳಿ ಹೋಬಳಿಯಲ್ಲಿ ಅತೀ ಹೆಚ್ಚು ಅಂದರೆ 120 ಮಿಮೀ ಮಳೆ ದಾಖಲಾಗಿದೆ. ಉಳಿದಂತೆ ಮಡಿಕೇರಿ ಕಸಬಾ 64, ನಾಪೋಕ್ಲು 68.60, ಸಂಪಾಜೆ 57.50, ಭಾಗಮಂಡಲ 95, ವಿರಾಜಪೇಟೆ 29.20, ಅಮ್ಮತ್ತಿ 27, ಹುದಿಕೇರಿ 28, ಶ್ರೀಮಂಗಲ 73, ಪೊನ್ನಂಪೇಟೆ 10, ಬಾಳೆಲೆ 16, ಸೋಮವಾರಪೇಟೆ 44, ಶನಿವಾರಸಂತೆ 31, ಕೊಡ್ಲಿಪೇಟೆ 22.40, ಕುಶಾಲನಗರ 11 ಹಾಗೂ ಸುಂಟಿಕೊಪ್ಪ 23 ಮಿ.ಮೀ.ಮಳೆಯಾಗಿದೆ.
2859 ಅಡಿ ಎತ್ತರದ ಹಾರಂಗಿ ಜಲಾಶಯದಲ್ಲಿ ಶುಕ್ರವಾರದ ಮಾಹಿತಿ ಪ್ರಕಾರ 2850.84 ಅಡಿ ನೀರಿದೆ. 7445 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ನದಿಗೆ 7833 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.