

ಮಡಿಕೇರಿ:
ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಂಗಳವಾರ ರಾತ್ರಿಯಿಂದ ಬಿರುಸು ಪಡೆದುಕೊಂಡಿದ್ದ ಮಳೆ ಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನ ತನಕ ಸ್ವಲ್ಪ ಅಬ್ಬರ ಕಡಿಮೆ ಮಾಡಿತ್ತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲೂ ಮಧ್ಯಾಹ್ನ ತನಕ ಮಳೆ ಕೊಂಚ ಬಿಡುವು ಪಡೆದುಕೊಂಡAತಿತ್ತು. ಆದರೆ ನಂತರ ಆಗಾಗ್ಗೆ ಜೋರಾಗಿ ಬೀಳುವ ಮೂಲಕ ಮಳೆಯ ವಾತಾವರಣ ನಿರ್ಮಾಣ ಮಾಡಿತ್ತು. ಭಾಗಮಂಡಲ, ನಾಪೋಕ್ಲು, ವಿರಾಜಪೇಟೆ, ಗೋಣಿಕೊಪ್ಪಲು, ಹುದಿಕೇರಿ, ಬಿರುನಾಣಿ ಭಾಗದಲ್ಲೂ ಜೋರು ಮಳೆಯಾಗಿದೆ. ಈ ಮಧ್ಯೆ ಗುರುವಾರ ಬೆಳಗ್ಗೆ 8.30ರ ತನಕ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕುಶಾಲನಗರ ತಾಲೂಕಿನಲ್ಲಿ ಮಳೆಯ ಅಬ್ಬರ ಅಷ್ಟಾಗಿ ಇರಲಿಲ್ಲ. ಸೋಮವಾರಪೇಟೆ ತಾಲೂಕಿನಲ್ಲಿ ಬಿರುಸಿನ ಮಳೆ ಆಗಿದೆ. ಮುನ್ಸೂಚನೆ ಕ್ರಮವಾಗಿ ಮಂಗಳವಾರ ರಾತ್ರಿಯೇ ತಾಲೂಕಿನ 10 ಕ್ಲಸ್ಟರ್‌ಗಳ ವ್ಯಾಪ್ತಿಯ ಶಾಲೆಗೆ ಬುಧವಾರ ರಜೆ ಎಂದು ಘೋಷಣೆ ಮಾಡಲಾಗಿತ್ತು. ಕುಶಾಲನಗರ ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳಿಗೆ ಬುಧವಾರ ಬೆಳಗ್ಗೆ ರಜೆ ಪ್ರಕಟಿಸಲಾಯಿತು.
ಕಳೆದ 24 ಗಂಟೆ ಅವಧಿಯಲ್ಲಿ ಕೊಡಗಿನಲ್ಲಿ ಸರಾಸರಿ 60.92 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 22.50 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆೆ 1234.91 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 582.32 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 57.18 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 49.95 ಮಿ.ಮೀ. ಪೊನ್ನಂಪೇಟೆ ತಾಲೂಕಿನಲ್ಲಿ 73.52 ಮಿ.ಮೀ ಸೋಮವಾರಪೇಟೆ ತಾಲೂಕಿನಲ್ಲಿ 107.05 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 16.90 ಮಿ.ಮೀ. ಸರಾಸರಿ ಮಳೆಯಾಗಿದೆ.
ಹೋಬಳಿವಾರು ಮಡಿಕೇರಿ ಕಸಬಾ 22, ನಾಪೋಕ್ಲು 71.60, ಸಂಪಾಜೆ 47.50, ಭಾಗಮಂಡಲ 87.60, ವಿರಾಜಪೇಟೆ 56.40, ಅಮ್ಮತ್ತಿ 43.50, ಹುದಿಕೇರಿ 89, ಶ್ರೀಮಂಗಲ 146, ಪೊನ್ನಂಪೇಟೆ 40, ಬಾಳೆಲೆ 19.08, ಸೋಮವಾರಪೇಟೆ 83.20, ಶನಿವಾರಸಂತೆ 112, ಶಾಂತಳ್ಳಿ 160, ಕೊಡ್ಲಿಪೇಟೆ 73, ಕುಶಾಲನಗರ 8.80 ಹಾಗೂ ಸುಂಟಿಕೊಪ್ಪದಲ್ಲಿ 25 ಮಿ.ಮೀ. ಮಳೆಯಾಗಿದೆ.
2859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ ಬುಧವಾರದ ಮಾಹಿತಿ ಪ್ರಕಾರ 2851.34 ಅಡಿ ನೀರಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, 8 ಸಾವಿರ ಕ್ಯೂಸೆಕ್ ನೀರಿನ ಒಳ ಹರಿವು ಇದೆ. ಸಂಜೆ 4 ಗಂಟೆಗೆ 10 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದ್ದು, ಕೆಳಪಾತ್ರದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಲಾಗಿದೆ.
ರಜೆಯ ಗೊಂದಲ:
ಜೋರು ಮಳೆ ಬಂದಾಗ ಕಳೆದ ವಾರದ ತನಕ ಜಿಲ್ಲೆಯಾದ್ಯಂತ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗುತ್ತಿತ್ತು. ಜಿಲ್ಲಾಧಿಕಾರಿಯೇ ನೇರವಾಗಿ ಮಾಧ್ಯಮಗಳ ಮೂಲಕ ಪ್ರಕಟಣೆ ಕೊಡುತ್ತಿದ್ದರು. ಆದರೆ ಈ ವಾರ ಮಂಗಳವಾರ ರಾತ್ರಿ ಸೋಮವಾರಪೇಟೆ ತಾಲೂಕಿಗೆ ಅಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ರಜೆ ಘೋಷಿಸಿದರು. ಉಳಿದ ತಾಲೂಕುಗಳಲ್ಲಿ ಮಳೆ ಹೆಚ್ಚಿದ್ದರೂ ರಜೆ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಬೆಳಗ್ಗೆ 8.15ರ ಮಡಿಕೇರಿ ತಾಲೂಕಿಗೆ ಸ್ಥಳೀಯ ಬಿಇಒ ರಜೆ ಬಗ್ಗೆ ಮಾಧ್ಯಮಗಳಿಗೆ ಪ್ರಕಟಣೆ ನೀಡಿದರು. ಇದಾದ 10 ನಿಮಿಷಗಳ ನಂತರ ಕುಶಾಲನಗರ ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳಿಗೆ ರಜೆ ಘೋಷಿಸಿ ಡಿಡಿಪಿಐ ಪ್ರಕಟಣೆ ಹೊರಡಿಸಿದರು. ಆದರೆ ಅಷ್ಟರಲ್ಲಾಗಲೇ ದೂರದ ಊರುಗಳಿಂದ ಶಾಲೆಗೆ ತೆರಳುವವರು ಮನೆ ಬಿಟ್ಟಾಗಿತ್ತು. ಶಾಲಾ ವಾಹನ ವ್ಯವಸ್ಥೆ ಇದ್ದ ಕಡೆಗಳಲ್ಲಿ ಅವರೇ ವಾಪಸ್ ಮನೆಗೆ ಕರೆತಂದು ಬಿಟ್ಟಿದ್ದರು. ಬಸ್‌ಗಳನ್ನು ಅವಲಂಬಿಸಿದ ಮಕ್ಕಳು ಈ ಸಂದರ್ಭ ಪರದಾಡಬೇಕಾಯಿತು. ಮಕ್ಕಳನ್ನು ಶಾಲೆಗೆ ಕಳಿಸಿ ದುಡಿಯಲು ತೆರಳಿದ್ದ ಪೋಷಕರು ಮನೆಗೆ ಬೀಗ ಹಾಕಿದ್ದರಿಂದ ಇಂತ ಕಡೆಗಳಲ್ಲಿ ಮಕ್ಕಳು ಮಳೆ, ಚಳಿಗೆ ಪರಿತಪಿಸುವ ಸ್ಥಿತಿ ನಿರ್ಮಾಣ ಆಗಿತ್ತು. ರಜೆ ಘೋಷಣೆಯ ಈ ಗೊಂದಲದ ಬಗ್ಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಮಳೆ ಇದ್ದ ಸಂದರ್ಭ ಒಂದು ದಿನ ಮೊದಲೇ ರಾತ್ರಿ ಅಥವಾ ಮುಂಜಾನೆ ಬೇಗ ರಜೆಯ ಪ್ರಕಟಣೆ ಹೊರಡಿಸುವಂತೆ ಮನವಿ ಮಾಡಿದ್ದಾರೆ.