ಕೊಡಗಿನಲ್ಲಿ ಚುರುಕಾದ ಆರಿದ್ರಾ ಮಳೆ

rain
Published on

ಮಡಿಕೇರಿ:

ಜಿಲ್ಲೆಯಲ್ಲಿ 2-3ದಿನಗಳ ಕಾಲ ಬಿಡುವು ಪಡೆದುಕೊಂಡಿದ್ದ ಮಳೆರಾಯ ಆರಿದ್ರ ಮಳೆ ಶುರುವಾಗುತ್ತಿದ್ದಂತೆಯೇ ಮತ್ತೆ ಚುರುಕು ಪಡೆದುಕೊಂಡಿದೆ. ಭಾನುವಾರ ಮಧ್ಯಾಹ್ನ ನಂತರ ಕೊಡಗಿನ ಬಹುತೇಕ ಕಡೆಗಳಲ್ಲಿ ಜೋರು ಮಳೆ ಆಗುತ್ತಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಭಾನುವಾರ ಮಧ್ಯರಾತ್ರಿ ನಂತರ ಭಾರಿ ಮಳೆಯಾಗಿದೆ. ಸೋಮವಾರ ದಿನಪೂರ್ತಿ ಮಳೆಯ ವಾತಾವರಣ ಕಂಡು ಬಂತು. ಚಳಿ ಕೂಡ ಇತ್ತು.

ಮಳೆಯಿಂದಾಗಿ ಜಿಲ್ಲೆಯ ಅಲ್ಲಲ್ಲಿ ಹಾನಿ ಆದ ವರದಿ ಆಗಿದೆ. ಕುಶಾಲನಗರ ತಾಲೂಕು ಸುಂಟಿಕೊಪ್ಪ ಹೋಬಳಿಯ ಕಾನ್‌ಬೈಲು ಬೈಚನಹಳ್ಳಿ ಗ್ರಾಮದ ಪಿ.ಬಿ. ಗುರುವ ಎಂಬವರ ಮನೆಯ ಹಿಂಬದಿ ಗೋಡೆ ಭಾನುವಾರ ರಾತ್ರಿಯ ಮಳೆಗೆ ಕುಸಿದು ಬಿದ್ದಿದೆ. ಮಡಿಕೇರಿ ತಾಲೂಕು ಸಂಪಾಜೆ ಹೋಬಳಿ ಕಾಟಕೇರಿ ಗ್ರಾಮದ ಅಶ್ವಥ್ ಭಟ್ ಎಂಬುವರ ವಾಸದ ಮನೆಯ ಗೋಡೆಯೂ ಭಾನುವಾರದ ಮಳೆಗೆ ಉರುಳಿದೆ. ಹಾನಿ ಸಂಭವಿಸಿದ ಪ್ರದೇಶಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 68.54 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 6.55 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1142.47 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 529.05 ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ 99.60 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 71.80 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 60.17 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 63.05 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 48.10 ಮಿ.ಮೀ. ಸರಾಸರಿ ಮಳೆಯಾಗಿದೆ.

ಭಾಗಮಂಡಲ ಹೋಬಳಿಯಲ್ಲಿ ಅತೀ ಹೆಚ್ಚು ಎಂದರೆ 141.60 ಮಿ.ಮೀ. ಮಳೆ ದಾಖಲಾಗಿದೆ. ಮಡಿಕೇರಿ ಕಸಬಾ 64, ನಾಪೋಕ್ಲು 98.80, ಸಂಪಾಜೆ 94, ವಿರಾಜಪೇಟೆ 78.60, ಅಮ್ಮತ್ತಿ 65, ಹುದಿಕೇರಿ 57.60, ಶ್ರೀಮಂಗಲ 98, ಪೊನ್ನಂಪೇಟೆ 55, ಬಾಳೆಲೆ 30.07, ಸೋಮವಾರಪೇಟೆ 86.20, ಶನಿವಾರಸಂತೆ 43, ಶಾಂತಳ್ಳಿ 106, ಕೊಡ್ಲಿಪೇಟೆ 17, ಕುಶಾಲನಗರ 36.20 ಹಾಗೂ ಸುಂಟಿಕೊಪ್ಪ 60 ಮಿ.ಮೀ.ಮಳೆಯಾಗಿದೆ.

2859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ ಸೋಮವಾರದ ಮಾಹಿತಿ ಪ್ರಕಾರ 2,851.68 ಅಡಿ ನೀರಿದೆ. 5266 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ನದಿಗೆ 3,000 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net