

ಮಡಿಕೇರಿ:
ಕೊಡಗಿನ ಬಹುತೇಕ ಕಡೆಗಳಲ್ಲಿ ಸೋಮವಾರವೂ ಮಳೆಯ ವಾತಾವರಣ ಮುಂದುವರಿದಿತ್ತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜಿಟಿ ಜಿಟಿ ಮಳೆ ಮಧ್ಯೆ ಆಗಾಗ್ಗೆ ಸಾಧಾರಣ ಮಳೆಯೂ ಕಾಣಿಸಿಕೊಳ್ಳುತ್ತಿತ್ತು. ದಿನಪೂರ್ತಿ ಚಳಿಯ ವಾತಾವರಣ ಇತ್ತು. ಸೋಮವಾರಪೇಟೆ, ವಿರಾಜಪೇಟೆ ಭಾಗದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿತ್ತು. ಕುಶಾಲನಗರ ವ್ಯಾಪ್ತಿಯಲ್ಲಿ ತುಂತುರು ಮಳೆ ಆಗುತ್ತಿತ್ತು.
ಪೊನ್ನಂಪೇಟೆ ತಾಲೂಕು ಪೊನ್ನಂಪೇಟೆ ಹೋಬಳಿ ಹುದೂರು ಗ್ರಾಮದ ನಿವಾಸಿ ಹೆಚ್.ಕೆ. ರವಿ ಅವರ ವಾಸದ ಮನೆಯ ಗೋಡೆ ಸೋಮವಾರದ ವಿಪರೀತ ಗಾಳಿ ಮಳೆಯಿಂದ ಕುಸಿದು ತೀವ್ರ ಹಾನಿಯಾಗಿದೆ. ಬಾಡಗ ಬಾಣಂಗಾಲ ಗ್ರಾಮದ ಕೆ.ಪಿ ಅಮೀನ ಎಂಬವರ ವಾಸದ ಮನೆಯ ಮುಂಭಾಗದ ಗೋಡೆ ಮತ್ತು ಛಾವಣಿಗೂ ಮಳೆಯಿಂದ ಹಾನಿಯಾಗಿದೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 48.80 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.28 ಮಿ.ಮೀ. ಮಳೆ ಬಂದಿತ್ತು. ಜನವರಿಯಿಂದ ಇಲ್ಲಿಯವರೆಗೆ 913.84 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 488.06 ಮಿ.ಮೀ. ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 80.55 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ47.95 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 48.49 ಮಿ.ಮೀ.,
ಸೋಮವಾರಪೇಟೆ ತಾಲೂಕಿನಲ್ಲಿ 53.60 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 13.40 ಮಿ.ಮೀ. ಸರಾಸರಿ ಮಳೆಯಾಗಿದೆ.
ಭಾಗಮಂಡಲ ಹೋಬಳಿಯಲ್ಲಿ ಅತೀ ಹೆಚ್ಚು ಅಂದರೆ 122 ಮಿಮೀ ಮಳೆ ದಾಖಲಾಗಿದೆ. ಮಡಿಕೇರಿ ಕಸಬಾ 43, ನಾಪೋಕ್ಲು 50.20, ಸಂಪಾಜೆ 107, ವಿರಾಜಪೇಟೆ 49.40, ಅಮ್ಮತ್ತಿ 46.50, ಹುದಿಕೇರಿ 69.90, ಶ್ರೀಮಂಗಲ 64, ಪೊನ್ನಂಪೇಟೆ 42, ಬಾಳೆಲೆ 18.07, ಸೋಮವಾರಪೇಟೆ 43.40, ಶನಿವಾರಸಂತೆ 32, ಶಾಂತಳ್ಳಿ 109, ಕೊಡ್ಲಿಪೇಟೆ 30, ಕುಶಾಲನಗರ 6.80 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 20 ಮಿ.ಮೀ.ಮಳೆಯಾಗಿದೆ.
2859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ ಸೋಮವಾರದ ಮಾಹಿತಿ ಪ್ರಕಾರ 2851.78 ಅಡಿಗಳಷ್ಟು ನೀರಿದೆ. ಕಳೆದ ವರ್ಷ ಇದೇ ದಿನ 2827.81 ಅಡಿ ನೀರಿತ್ತು.4736 ಕ್ಯೂಸೆಕ್ ಒಳಹರಿವು ಇದ್ದು, ನದಿಗೆ 4583 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.