

ಕೋಲಾರ: ಜಿಲ್ಲೆಯಾದ್ಯಂತ ಭಾನುವಾರ ಭರ್ಜರಿ ಮಳೆ ಸುರಿದಿದ್ದು, ಕೋಲಾರ ನಗರದ ತಗ್ಗು ಪ್ರದೇಶದ ಮನೆಗಳು ಜಲಾವೃತವಾಗಿದ್ದವು.
2.50ರಿಂದ ಸತತ ಎರಡೂವರೆ ಗಂಟೆ ಮಳೆ ಸುರಿಯಿತು. ಮುಂಗಾರಿನಲ್ಲಿ ಇದೇ ಮೊದಲ ಬಾರಿಗೆ ಈ ಪ್ರಮಾಣದ ಮಳೆಯಾಗಿದೆ. ಕೋಲಾರ- ಅಂತರಗಂಗೆ ರಸ್ತೆಯ ರೈಲ್ವೆ ಅಂಡರ್‌ಪಾಸ್‌ನಲ್ಲಿ 10 ಅಡಿಗೂ ಅಧಿಕ ನೀರು ನಿಂತಿದ್ದರಿಂದ ಜನಸಂಚಾರ ಸ್ಥಬ್ಧವಾಗಿತ್ತು. ಕೀಲುಕೋಟೆ, ಶಿವಕೇಶವನಗರದ ರಸ್ತೆ, ಮುನೇಶ್ವರ ನಗರದ ಎರಡ್ಮೂರು ಅಡ್ಡ ರಸ್ತೆ, ಜಿಲ್ಲಾ ಕ್ರೀಡಾಂಗಣ ರಸ್ತೆಗಳಲ್ಲಿ ನೀರು ಸಂಗ್ರಹವಾಗಿ ಸಂಗಮವಾದಂತೆ ಕಂಡುಬಂತು.
ಅಂಡರ್‌ಪಾಸ್ ಎತ್ತರಕ್ಕೆ ನೀರು ತುಂಬಿದ್ದರಿಂದ ಮುನೇಶ್ವರ ನಗರದ ಹಲವು ಬೀದಿಗಳಲ್ಲಿ ಮನೆ ಮುಂಭಾಗದಲ್ಲೇ ನೀರು ಹರಿಯಿತು. ಜಿಲ್ಲಾ ಕ್ರೀಡಾಂಗಣ ಬಳಿಯ ಅಂಡರ್‌ಪಾಸ್‌ನಲ್ಲೂ ನೀರು ತುಂಬಿ ಅಕ್ಕಪಕ್ಕದ ಮನೆಗಳಿಗೂ ನುಗ್ಗಿತ್ತು.
ಕುವೆಂಪು ಪಾರ್ಕ್ ಜಲಾವೃತಗೊಂಡಿತ್ತು. ಜೋಡಿ ರಸ್ತೆಯಲ್ಲಿರುವ ರಾಜ ಕಾಲುವೆಯ ದುರಸ್ತಿ ಕಾಮಗಾರಿಗಾಗಿ ಹೂಳು ತೆಗೆದು ತೆರವುಗೊಳಿಸದಿರುವುದರಿಂದ ಕೊಳಚೆ ಹರಡಿ ವಾತಾವರಣ ಕಲುಷಿತಗೊಂಡಿತ್ತು. ರಹಮತ್ ನಗರದ ಮುಖ್ಯರಸ್ತೆಯ ಶಾಂತಿನಗರದಲ್ಲಿ ಹತ್ತಾರು ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ನೀರು ಹೊರಚೆಲ್ಲಲು ಬೆವರು ಹರಿಸುವಂತಾಗಿತ್ತು. ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸಹಿತ ವಿದ್ಯುತ್ ಕಂಬ ವಾಲಿ ನಿಂತಿದೆ.
ಹಳೇ ಡಿಸಿ ಕಚೇರಿ ಬಳಿಯ ರಾಜ ಕಾಲುವೆಯಲ್ಲಿ ನೀರು ಹೊಳೆಯಂತೆ ಹರಿಯುತ್ತಿದ್ದು ಕೋಲಾರಮ್ಮ ಕೆರೆ ಸೇರುತ್ತಿದೆ. ಪಕ್ಕದಲ್ಲಿರುವ ತೋಟಗಾರಿಕೆ ಸಸ್ಯಕ್ಷೇತ್ರದಲ್ಲಿನ ಪುರಾತನ ನಾಲ್ಕು ಚಕ್ರ ಬಾವಿ ಒಳಗೊಂಡ ಕಲ್ಯಾಣಿ ನೀರಿನಿಂದ ತುಂಬಿ ಸೌಂದರ್ಯ ಹೆಚ್ಚಿಸಿಕೊಂಡಿದೆ.
ಕೋಲಾರ ಎಪಿಎಂಸಿ ಪ್ರಾಂಗಣದಲ್ಲಿ ನೀರು ತುಂಬಿರುವುದರಿಂದ ಟೊಮ್ಯಾಟೊ ವ್ಯಾಪಾರಕ್ಕೆ ಅಡಚಣೆಯಾಯಿತು. ಸಿಂಡಿಕೇಟ್ ಬ್ಯಾಂಕ್ ರಸ್ತೆ ಸೇರಿ ಇನ್ನಿತರ ಕಡೆ ಅಮೃತಸಿಟಿ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಚರಂಡಿ ಕಾಮಗಾರಿಯಿಂದಾಗಿ ಮಳೆ ನೀರು ರಸ್ತೆಗೆ ಹರಿಯುತ್ತಿದೆ, ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು ಮಳೆಯಿಂದಾಗಿ ಸಣ್ಣ ಸಣ್ಣ ಹೊಂಡಗಳು ನಿರ್ಮಾಣವಾಗಿವೆ.
ಕೋಲಾರ ಹೆದ್ದಾರಿ 75ರ ಸೇವಾ ರಸ್ತೆಯಲ್ಲಿರುವ ಚರಂಡಿಗಳಲ್ಲಿ ತುಂಬಿಕೊಂಡಿದ್ದ ಕಸ ಮಳೆ ನೀರಿನಿಂದಾಗಿ ಕೊಚ್ಚಿ ರಸ್ತೆಗೆ ಸೇರಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗಿದ್ದಲ್ಲದೆ ದುರ್ವಾಸನೆ ವ್ಯಾಪಿಸಿದೆ. ನಗರದ ಬಹುತೇಕ ಮನೆಗಳ ಮೆಟ್ಟಲುಗಳ ಮೇಲೆ ಹರಿದ ನೀರು ಜಲಪಾತದಂತೆ ಕಂಗೊಳಿಸಿತು. ಬಹುತೇಕ ಮನೆಗಳಲ್ಲಿ ಮಳೆ ಕೊಯ್ಲು ಅಳವಡಿಸಿಕೊಳ್ಳದಿರುವುದರಿಂದ ನೀರು ವ್ಯರ್ಥವಾಯಿತು. ಕೆಲವು ಮನೆಗಳಲ್ಲಿ ಮಳೆ ನೀರು ಸಂಪುಗಳಲ್ಲಿ ತುಂಬಿ ಹರ್ಷವನ್ನುಂಟು ಮಾಡಿತು.
ಜಿಲ್ಲೆಯ ಅನ್ನದಾತರು ವರುಣನ ಕೃಪೆಗೆ ಸಂತಸಗೊಂಡಿದ್ದಾರೆ, ಮಳೆಯಿಲ್ಲದೆ ಬರಡಾಗಿದ್ದ ಕೃಷಿ ಹೊಂಡದಲ್ಲಿ ನೀರು ತುಂಬಿದ್ದು ಜನ-ಜಾನುವಾರುಗಳ ಪ್ರಾಣ ರಕ್ಷಣೆ ಮಾಡಲು ಸೂಕ್ತ ಬೇಲಿ ನಿರ್ಮಿಸಲು ರೈತರು ಗಮನ ಹರಿಸಬೇಕಾಗಿದೆ. ಜಿಲ್ಲೆಯ ನೂರಾರು ಚೆಕ್ ಡ್ಯಾಮ್‌ಗಳು ಮಳೆ ನೀರಿನಿಂದ ತುಂಬಿ ಕಂಗೊಳಿಸುತ್ತಿವೆ.
3 ವರ್ಷದ ನಂತರ ಭೋರ್ಗರೆತ: ಅಂತರಗಂಗೆ ಬೆಟ್ಟದಿಂದ ಕೋಲಾರಮ್ಮ ಕೆರೆಗೆ ಹರಿಯುವ ರಾಜಕಾಲುವೆ ಮೂರು ವರ್ಷದ ನಂತರ ಭೋರ್ಗರೆದಿದೆ. ಅಂತರಗಂಗೆಯಲ್ಲಿ ಮಿನಿ ಜಲಪಾತ ಸೃಷ್ಟಿಯಾಗಿ ಜನರನ್ನು ಆಕರ್ಷಿಸುತ್ತಿದೆ.
ಮನೆ ನುಗ್ಗಿದ ನೀರು: ಕಾರಂಜಿಕಟ್ಟೆಯ 9ನೇ ಕ್ರಾಸ್‌ನ ರಾಜ ಕಾಲುವೆಯಲ್ಲಿ ನೀರು ಉಕ್ಕಿ ಹರಿದರೆ, 11ನೇ ಕ್ರಾಸ್‌ನಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಪರಮೇಶಿ ಎಂಬುವರ ಕೃಷಿ ಭೂಮಿಗೆ ನೀರು ನುಗ್ಗಿ ಮೂಲಂಗಿ, ಜೋಳದ ಬೆಳೆ ಹಾನಿಗೀಡಾಗಿದೆ. ಖಾದ್ರಿಪುರದ ಬಳಿಯ ರೈಲ್ವೆ ಅಂಡರ್ ಪಾಸ್‌ನಲ್ಲಿ ನೀರು ತುಂಬಿಕೊಂಡಿದ್ದರಿಂದ ಸುತ್ತಮುತ್ತಲ ಪ್ರವೇಶ ಮಿನಿ ದ್ವೀಪದಂತಾಗಿ ಜನ ಮನೆಗಳಿಂದ ಹೊರ ಬರಲಾಗದೆ ಪರದಾಡಿದರು.