

ಗುರುಪುರ: ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಗುರುಪುರ ಕೈಕಂಬ ಜಂಕ್ಷನ್ನಲ್ಲಿ ಧಾರಾಕಾರ ಮಳೆಗೆ ಆಗಾಗ್ಗೆ ಅಕ್ಷರಶಃ ಪ್ರವಾಹ ಹರಿಯುತ್ತಿದೆ. ಮಳೆ ನೀರು, ಕೊಳಚೆ ನೀರು, ಕೆಸರು ನೀರೆಲ್ಲ ರಸ್ತೆಯಲ್ಲಿ ಹರಿಯುತ್ತಿದೆ. ಇಲ್ಲಿ ವಾಹನ ಸಂಚಾರ ದುಸ್ತರವೆನಿಸಿದೆ.
ಎರಡು ವಾರ ಮುಂಚಿತವಾಗಿ ಮುಂಗಾರು ಆರಂಭವಾಗಿದ್ದರೂ, ಅಪೂರ್ಣ ಕಾಮಗಾರಿಯಿಂದ ಹೆದ್ದಾರಿಯ ಬಹುತೇಕ ಕಡೆಗಳಲ್ಲಿ ಕೃತಕ ನೆರೆ ಉಂಟಾಗಿದೆ. ಎತ್ತರಕ್ಕೆ ಮಣ್ಣು ಹಾಕಿ ಡಾಂಬರು ರಸ್ತೆ ನಿರ್ಮಿಸಲಾಗಿದ್ದರೂ, ತಗ್ಗುಪ್ರದೇಶಗಳತ್ತ ನೀರು ಹರಿದು ಹೋಗಲು ಸೂಕ್ತ ಮೋರಿ ಅಥವಾ ತಡೆಗೋಡೆ ನಿರ್ಮಿಸಿಲ್ಲ. ಹಾಗಾಗಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಹೊಂಡಗಳಲ್ಲಿ ಕೆಸರು ನೀರು ತುಂಬಿಕೊಂಡಿದ್ದು, ವಾಹನ ಸಂಚಾರಕ್ಕೆ ಅಪಾಯ ಎದುರಾಗಿದೆ.
ಬೇಸಗೆ ಹೊತ್ತಲ್ಲಿ ಕೈಕಂಬ ಜಂಕ್ಷನ್ನಲ್ಲಿದ್ದ ಹಳೆಯ ಮೋರಿಯಲ್ಲಿ ಕೊಳಚೆ ನೀರು ತುಂಬಿಕೊಂಡಿತ್ತು. ಹೆದ್ದಾರಿ ಕಾಮಗಾರಿ ವೇಳೆ ಮತ್ತೆ ಮಣ್ಣು ತುಂಬಿ ಕೊಳಚೆ ತುಂಬಿದ ಕೆಸರು ನೀರು ರಸ್ತೆಯಲ್ಲಿ ಹರಿಯುತ್ತಿದೆ. ದುರ್ವಾಸನೆ ಎಲ್ಲೆಡೆ ಬೀರುತ್ತಿದೆ. ಜೋರು ಮಳೆಯಾದಾಗ ಲಘು ವಾಹನಗಳು ಅರ್ಧದಷ್ಟು ನೀರಲ್ಲಿ ಮುಳುಗಿ ಮುಂದೆ ಸಂಚರಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಬಿಟ್ಟಿವೆ. ಇಲ್ಲೆಲ್ಲ ತಕ್ಷಣ ದುರಸ್ತಿ ಕಾರ್ಯ ನಡೆಯಬೇಕು. ಇಲ್ಲವಾದಲ್ಲಿ ಇನ್ನಷ್ಟು ಮಳೆಗೆ ಕೈಕಂಬ ಜಂಕ್ಷನ್ನ ಅಂಗಡಿಗಳ ಒಳಗೂ ನೀರು ನುಗ್ಗಿದರೆ ಅಚ್ಚರಿಪಡಬೇಕಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.