

ಮಡಿಕೇರಿ:
ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಶುಕ್ರವಾರ ಇಳಿಮುಖ ಆಗಿದೆ. ನದಿಗಳಲ್ಲೂ ನೀರಿನ ಮಟ್ಟ ಕಡಿಮೆ ಆಗುತ್ತಿದೆ. ಕಳೆದ 5 ದಿನಗಳಿಗೆ ಹೋಲಿಸಿದರೆ ಮಡಿಕೇರಿಯಲ್ಲಿ ವರುಣನ ಅಬ್ಬರ ಸಾಕಷ್ಟು ಇಳಿದಿದೆ. ಆಗಾಗ್ಗೆ ಚಿಕ್ಕಪುಟ್ಟ ಮಳೆ ಹೊರತುಪಡಿಸಿದರೆ ಪರಿಸ್ಥಿತಿ ಸಮಾಧಾನಕರವಾಗಿದೆ.
ಮಳೆಯ ಕಾರಣದಿಂದ ಅಲ್ಲಲ್ಲಿ ಸಣ್ಣಪುಟ್ಟ ಹಾನಿ ಮುಂದುವರಿದಿದೆ. ಸೋಮವಾರಪೇಟೆ ತಾಲೂಕು ತಾಕೇರಿ ಗ್ರಾಮದ ನಿವಾಸಿ ಎಂ.ಟಿ. ರಘು ಎಂಬವರÀ ಹಸು ಮಳೆಯಿಂದ ವಿದ್ಯುತ್ ಕಂಬ ಬಿದ್ದು ಸಾವನ್ನಪ್ಪಿದೆ. ವಿರಾಜಪೇಟೆ ಹೋಬಳಿ, ಮೈತಾಡಿ ಗ್ರಾಮದ ಗೌರಮ್ಮ ಎಂಬವರ ವಾಸದ ಮನೆಯ ಗೋಡೆ ಮಳೆಯಿಂದ ಕುಸಿದು ಭಾಗಶಃ ಹಾನಿ ಆಗಿದೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 50.45 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 2.05 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 693.72 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 329.02 ಮಿ.ಮೀ. ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 54.48 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 51 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 54.13 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 50.75 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ ಸರಾಸರಿ 41.90 ಮಿ.ಮೀ. ಮಳೆಯಾಗಿದೆ.
ಜಿಲ್ಲ್ಲೆಯಲ್ಲಿ ಶಾಂತಳ್ಳಿ ಹೋಬಳಿಯಲ್ಲಿ ಅತೀ ಹೆಚ್ಚು ಅಂದರೆ 100 ಮಿಮೀ ಮಳೆಯಾಗಿದೆ. ಉಳಿದಂತೆ ಮಡಿಕೇರಿ ಕಸಬಾ 59, ನಾಪೋಕ್ಲು 58.80, ಸಂಪಾಜೆ 17.50, ಭಾಗಮಂಡಲ 82.60, ವಿರಾಜಪೇಟೆ 53, ಅಮ್ಮತ್ತಿ 49, ಹುದಿಕೇರಿ 54.60, ಶ್ರೀಮಂಗಲ 56, ಪೊನ್ನಂಪೇಟೆ 65, ಬಾಳೆಲೆ 40.90, ಸೋಮವಾರಪೇಟೆ 65, ಶನಿವಾರಸಂತೆ 27 ಕೊಡ್ಲಿಪೇಟೆ 11, ಕುಶಾಲನಗರ 37.60 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 46.20 ಮಿ.ಮೀ. ಮಳೆ ದಾಖಲಾಗಿದೆ.
2859 ಅಡಿ ಎತ್ತರದ ಹಾರಂಗಿ ಜಲಾಶಯದದಲ್ಲಿ ಶುಕ್ರವಾರದ ಮಾಹಿತಿ ಪ್ರಕಾರ 2846.37 ಅಡಿ ನೀರಿತ್ತು. ಕಳೆದ ವರ್ಷ ಇದೇ ದಿನ 2824.10 ಅಡಿ ನೀರಿನ ಸಂಗ್ರಹ ಇತ್ತು. ನೀರಿನ ಒಳಹರಿವು 7204 ಕ್ಯೂಸೆಕ್ ಆಗಿದ್ದು ಕಳೆದ ವರ್ಷ ಇದೇ ದಿನ 224 ಕ್ಯೂಸೆಕ್ ಒಳಹರಿವು ಇತ್ತು. ನದಿಗೆ 100 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕಳೆದ ವರ್ಷ ನದಿಗೆ 200 ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು.