ಜಲಾಶಯದಂತಾದ ಕೈಕಂಬ ಜಂಕ್ಷನ್ : ಮಳೆ ನೀರಿನ ತೋಡಾದ ರೋಡ್ ಬಂಡಸಾಲೆ, ಬಡಕರೆಯಲ್ಲಿ ಜಲ ದಿಗ್ಬಂಧನ

Published on

ಗುರುಪುರ: ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ನಡೆದಿರುವ ಅರ್ಧಂಬರ್ಧ ಕಾಮಗಾರಿಯಿಂದ ಗುರುಪುರ, ಪರಾರಿ, ಕೆತ್ತಿಕಲ್, ನೂಯಿ, ಕೈಕಂಬ ವಿಕಾಸನಗರ, ಕೈಕಂಬ ಜಂಕ್ಷನ್‌ನಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿ ನಾಗರಿಕರು ಕಂಗಾಲಾಗಿದ್ದಾರೆ.

ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ನೂಯಿಯಲ್ಲಿ ರಸ್ತೆ ಮತ್ತಷ್ಟು ಜರಿದಿದ್ದರೆ, ಕೈಕಂಬಕ್ಕೆ ಹತ್ತಿರದ ವಿಕಾಸನಗರದಲ್ಲಿ ಹೆದ್ದಾರಿ ಮಧ್ಯೆ ಬೃಹತ್ ಕೊಳವೊಂದು ಸೃಷ್ಟಿಯಾಗಿ, ವಾಹನ ಸವಾರರು ಭೀತಿಯಿಂದ ಮುಂದೆ ಸಾಗುವಂತಾಗಿದೆ. ಈಗಾಗಲೇ ಕೆಲವು ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗಿರುವ ಇಲ್ಲಿ ತುರ್ತು ದುರಸ್ತಿ ಕಾರ್ಯ ನಡೆಯಬೇಕಿದೆ. ಕಳೆದ ವರ್ಷವೂ ಇಲ್ಲಿ ಇದೇ ಸ್ಥಿತಿ ಇತ್ತು.

ತೋಡಾದ ಕೈಕಂಬ ಜಂಕ್ಷನ್ ರೋಡ್: ಕೈಕಂಬ ಜಂಕ್ಷನ್‌ನಲ್ಲಿ ನಾಲ್ಕು ದಿಕ್ಕಿನಲ್ಲೂ ಹೆದ್ದಾರಿ ವಿಸ್ತರಣೆಗಾಗಿ ಭೂಮಿ ಅಗೆಯಲಾಗಿದ್ದು, ಮೂರು ಕಡೆ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ. ಇಲ್ಲೆಲ್ಲ ಮಳೆ ನೀರು ಆಳೆತ್ತರಕ್ಕೆ ನಿಂತಿದ್ದು, ಕೈಕಂಬ ಜಂಕ್ಷನ್ ಕೊಳದಂತಾಗಿದೆ. ಕೆಸರು ನೀರು, ಚೆಲ್ಲಿ ಹೋಗಿರುವ ಜಲ್ಲಿಕಲ್ಲು, ಅಲ್ಲಲ್ಲಿ ದೊಡ್ಡದೊಡ್ಡ ಹೊಂಡಗಳು ಸೃಷ್ಟಿಯಾಗಿದ್ದು, ವಾಹನ ಸವಾರರಿಗೆ ಹೆದ್ದಾರಿ ಅಪಾಯಕಾರಿಯಾಗಿ ಪರಿಣಮಿಸಿದೆ. ಸತತ ಮಳೆಯಿಂದ ಕೃತಕ ನೆರೆ ಸೃಷ್ಟಿಯಾಗಿ, ಆಗಾಗ್ಗೆ ಟ್ರಾಫಿಕ್ ಜಾಮ್ ಆಗುತ್ತಿದೆ.

ಚರಂಡಿಗಳ ರಚನೆ ಇಲ್ಲದೆ ರೋಡ್ ತೋಡಾಗಿದೆ. ರಸ್ತೆಯ ಇಕ್ಕೆಲಗಳ ಅಂಗಡಿಗಳಿಗೆ ನಿರಂತರ ಕೆಸರು ನೀರು ಹಾಯುತ್ತಿದ್ದರೆ, ಪಾದಚಾರಿಗಳಿಗೆ ನಡೆದಾಡುವುದು ಕಷ್ಟಕರವಾಗಿದೆ. ಹೆದ್ದಾರಿಯಲ್ಲಿ ಚರಂಡಿ ವ್ಯವಸ್ಥೆ, ಮಣ್ಣು ತೆರವು, ಪೈಪ್‌ಲೈನ್ ಅಳವಡಿಕೆ ತೀರಾ ವಿಳಂಬವಾಗಿದೆ. ಆದ್ದರಿಂದ ಹೆದ್ದಾರಿ ವಿಸ್ತರಣಾ ಕಾಮಗಾರಿ ನಡೆಯುತ್ತಿರುವ ಬಹುತೇಕ ಎಲ್ಲ ಕಡೆ ನಾನಾ ರೀತಿಯ ಅವಾಂತರ ಸೃಷ್ಟಿಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಕೈಕಂಬ ಜಂಕ್ಷನ್
ಕೈಕಂಬ ಜಂಕ್ಷನ್

ತ್ತಿಕಲ್ ಗುಡ್ಡೆ ಕುಸಿತ ಭೀತಿ

ಸತತ ಮಳೆಯಿಂದ ಗುರುಪುರ ಪಂಚಾಯಿತಿ ವ್ಯಾಪ್ತಿಯ ಮೂಳೂರು ಗ್ರಾಮದ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಗುಡ್ಡ ಕುಸಿದಿದೆ. ಮತ್ತೊಂದಡೆ ಕೆತ್ತಿಕಲ್ ಪ್ರದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮೂಲಕ ನಿರ್ಮಿಸಲಾದ ತಡೆಗೋಡೆಯಲ್ಲಿ ಕೊರೆತ, ಬಿರುಕು ಕಾಣಿಸಿಕೊಂಡಿದೆ. ಕ್ರಮೇಣ ಗುಡ್ಡ ಕುಸಿತ ಜಾಸ್ತಿಯಾಗುತ್ತಿದೆ. ಕೆತ್ತಿಕಲ್ ಪ್ರದೇಶದಲ್ಲಿ ಅರ್ಧಂಬರ್ಧ ಕಾಮಗಾರಿ ನಡೆದಿದ್ದು, ಈ ಬಾರಿಯ ಮಳೆಗೆ ಇನ್ನಷ್ಟು ಗುಡ್ಡ ಕುಸಿಯುವ ಸಾಧ್ಯತೆ ಇದೆ.

ಗ್ರಾಮೀಣ ಪ್ರದೇಶದಲ್ಲಿ ಕೃತಕ ನೆರೆ

ಗುರುಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಳೂರು ಗ್ರಾಮದ ಬಂಡಸಾಲೆ ಮತ್ತು ಬಡಕರೆಯಲ್ಲಿ ಮೊದಲ ಮಳೆಗೆ ಕೃತಕ ನೆರೆ ಸೃಷ್ಟಿಯಾಗಿದೆ. ಬಡಕರೆ ಗ್ರಾಮೀಣ ಪ್ರದೇಶದ ಗದ್ದೆಗಳಲ್ಲಿ ಭಾರಿ ಪ್ರಮಾಣದ ನೀರು ತುಂಬಿದ್ದು, ಸ್ಥಳೀಯರಿಗೆ ಜಲ ದಿಗ್ಬಂಧನ ಹಾಕಿದಂತಾಗಿದೆ. ನೀರು ಹರಿದು ಹೋಗುವ ಬೃಹತ್ ಕೊಳವೆಯಲ್ಲಿ ಮಣ್ಣು ತುಂಬಿರುವುದೇ ಪ್ರಸಕ್ತ ಅವಾಂತರಕ್ಕೆ ಕಾರಣ. ಪರಂಬೋಕು ತೋಡುಗಳು ಕಡಿದು ಹೋಗಿ, ಗುಡ್ಡದ ನೀರೆಲ್ಲ ಗದ್ದೆ ಪ್ರದೇಶದಲ್ಲಿ ಜಮೆಯಾಗಿದೆ. ಇಲ್ಲಿಂದ ತಗ್ಗು ಪ್ರದೇಶವಾಗಿ ಮಳೆ ನೀರು ಸರಾಗವಾಗಿ ನದಿ ಸೇರುವ ತೋಡುಗಳು ಮಾಯವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net