

ಮಡಿಕೇರಿ:
ಕೊಡಗಿನಲ್ಲಿ ಸೋಮವಾರವೂ ರೋಹಿಣಿ ಮಳೆಯ ಅಬ್ಬರ ಮುಂದುವರಿದಿದೆ. ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿಯಲ್ಲಿ 2 ದಿನಗಳಲ್ಲಿ ಸುಮಾರು 2 ಅಡಿಗಳಷ್ಟು ನೀರು ಜಾಸ್ತಿಯಾಗಿದೆ. ಜಿಲ್ಲೆಯ ಇನ್ನೊಂದು ಪ್ರಮುಖ ಜಲಾಶಯವಾದ ಚಿಕ್ಲಿಹೊಳೆ ಮೇ ತಿಂಗಳಿನಲ್ಲಿ ಇದೇ ಮೊದಲ ಬಾರಿ ಭರ್ತಿ ಆಗಿದ್ದು, ಸೋಮವಾರ ಬೆಳಗ್ಗೆ ಕೋಡಿ ಬಿದ್ದಿದೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಜತೆ ಗಾಳಿಯೂ ಇರುವುದರಿಂದ ಮರ ಮತ್ತು ಮರದ ರೆಂಬೆ ಬಿದ್ದು ಬಹಳಷ್ಟು ಕಡೆಗಳಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಸುಂಟಿಕೊಪ್ಪ ಹೋಬಳಿ ಹೊರೂರು ಗ್ರಾಮದ ನಿವಾಸಿ ದೇವಿಪ್ರಸಾದ್ ಅವರ ಕೊಟ್ಟಿಗೆ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಅಮ್ಮತ್ತಿ ಹೋಬಳಿ ಕರಡಿಗೋಡು ಗ್ರಾಮದ ಹೊಳೆಕೆರೆ ಭಾಗದ ಕಾವೇರಿ ನದಿಯಿಂದ ರಸ್ತೆಗೆ 3 ಅಡಿ ನೀರು ಬಂದಿದೆ. ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡAತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 126.79 ಮಿ.ಮೀ. ಮಳೆಯಾಗಿದ್ದು, ಭಾಗಮಂಡಲ ವ್ಯಾಪ್ತಿಯಲ್ಲಿ ಅತೀ ಹೆಚ್ಚು 225 ಮಿಮೀ ಮಳೆಯಾಗಿದೆ. ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಸೋಮವಾರವೂ ಮಳೆ ಮುಂದುವರಿದಿತ್ತು. ತ್ರಿವೇಣಿ ಸಂಗಮ ಮತ್ತು ಪಕ್ಕದ ಉದ್ಯಾನ ಮುಳುಗಿದೆ. 2,859 ಅಡಿ ಗರಿಷ್ಠ ಮಟ್ಟದ ಹಾರಂಗಿ ಜಲಾಶಯದಲ್ಲಿ ಪ್ರಸ್ತುತ 2834.70 ಅಡಿ ನೀರಿದೆ. ಕಳೆದ ವರ್ಷ ಇದೇ ದಿನ 2824.11 ಅಡಿ ನೀರಿತ್ತು.
ಈ ಮಧ್ಯೆ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಇರುವ ಜಲಪಾತಗಳು, ಝರಿ, ನದಿ, ತೊರೆ, ಸಾರ್ವಜನಿಕ ಕೆರೆಗಳು, ಅಣೆಕಟ್ಟು, ಜಲಾಶಯದ ಪ್ರದೇಶಗಳಲ್ಲಿ ಸಾರ್ವಜನಿಕರು, ಪ್ರವಾಸಿಗರು ಅನಧಿಕೃತವಾಗಿ ನೀರಿನಲ್ಲಿ ಇಳಿಯುವುದು, ಮುಳುಗು ಹೊಡೆಯುವುದು, ಸಾಹಸ ಚಟುವಟಿಕೆ ನಡೆಸುವುದು, ಈಜುವುದನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೋಮವಾರ ಆದೇಶ ಹೊರಡಿಸಿದ್ದಾರೆ.