

ಬೂದಿಕೋಟೆ: ಗಾಳಿಮಳೆಗೆ ಮನೆಗೋಡೆ ಕುಸಿದು ದಂಪತಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬೂದಿಕೋಟೆ ಹೋಬಳಿ ಗುಲ್ಲಹಳ್ಳಿ ಗ್ರಾಮ ಪಂಚಾಯಿತಿಯ ಕೊತ್ತೂರಿನಲ್ಲಿ ಗುರುವಾರ ರಾತ್ರಿ 10 ಗಂಟೆಯಲ್ಲಿ ಅವಘಡ ಸಂಭವಿಸಿದೆ.
ಹಳೇ ಮನೆಯಾಗಿದ್ದು, ಇತ್ತೀಚೆಗೆ ಸುರಿದಿದ್ದ ಮಳೆಗೆ ಸ್ವಲ್ಪ ತೊಯ್ದಿತ್ತು. ಗುರುವಾರ ಕೂಲಿ ಕೆಲಸ ಮುಗಿಸಿಕೊಂಡು ಬಂದ ಸಿದ್ದಪ್ಪ ಮತ್ತು ಜ್ಯೋತೆಮ್ಮ ಮಗುವಿನೊಂದಿಗೆ ಮಲಗಿದ್ದಾಗ ಹೆಂಚಿನ ಮನೆಯ ಗೋಡೆ ಕುಸಿದಿದೆ. ಈ ವೇಳೆ ಜ್ಯೋತೆಮ್ಮ (32)ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ಕೋಲಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಿದ್ದಪ್ಪ (44) ಅವರಿಗೂ ಕೈ ಕಾಲುಗಳಿಗೆ ಪೆಟ್ಟಾಗಿದ್ದು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 11 ವರ್ಷದ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಅಕ್ಕಪಕ್ಕದ ಗ್ರಾಮಸ್ಥರು ಹೆಂಚು, ಮರ ತೆರವುಗೊಳಿಸಿ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿದರು.
ಭಾರಿ ಗಾಳಿ ಮಳೆಗೆ ಗುಟ್ಟೂರು ಗ್ರಾಮದ ಬಳಿ ವಿದ್ಯುತ್ ತಂತಿ ಮೇಲೆ ಮರ ಬಿದ್ದ ಪರಿಣಾಮ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ.
ಗುರುವಾರ ರಾತ್ರಿ ಜೋರಾಗಿ ಗಾಳಿಯೊಂದಿಗೆ ಮಳೆ ಬೀಳುತ್ತಿತ್ತು. ರಾತ್ರಿ ಸುಮಾರು 10 ಗಂಟೆಗೆ ಇಡೀ ಮನೆ ಕುಸಿದು ನಮ್ಮ ಮೇಲೆ ಬಿದ್ದಿತು. ನಾನು ಮತ್ತು ನನ್ನ ಪತ್ನಿ ಮಗನನ್ನು ತಬ್ಬಿಕೊಂಡು ರಕ್ಷಣೆ ಮಾಡಿದೆವು. ಇದ್ದದ್ದು ಒಂದೇ ಮನೆ. ಈಗ ಸೂರಿಲ್ಲದ ಕಾರಣ ಎಲ್ಲಿ ಇರೋದು ಅಂತ ಗೊತ್ತಾಗುತ್ತಿಲ್ಲ. ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕು. ಸಿದ್ದಪ್ಪ, ಮನೆ ಕಳೆದುಕೊಂಡವ ಮನೆ ಕಳೆದುಕೊಂಡ ಸಿದ್ದಪ್ಪ ಕಡು ಬಡವರಾಗಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಸರ್ಕಾರದ ಮನೆ ಹಾಕಿಸಿಕೊಟ್ಟರೂ ಕಟ್ಟಿಸಿಕೊಳ್ಳಲಾಗದಂತಹ ನಿರ್ಗತಿಕರು. ಮಳೆಯಿಂದ ಮನೆ ಬಿದ್ದಿರುವ ಕಾರಣ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾನೂನಿನ ಅಡಿಯಲ್ಲಿ ಸೌಲಭ್ಯ ಕಲ್ಪಿಸುತ್ತೇನೆ. ಪಾರ್ವತಮ್ಮ ನಾಗರಾಜ್, ಜಿಪಂ ಸದಸ್ಯೆ