

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ನಗರದಲ್ಲಿ ಗುರುವಾರ ಸಂಜೆ ಸುರಿದ 40 ನಿಮಿಷಗಳ ಮಳೆಯ ಆರ್ಭಟಕ್ಕೆ ನಗರದ ತೇರಿನ ಬೀದಿ ರಸ್ತೆ ಜಲಾವೃತವಾಗಿತ್ತು. ಶಾಲೆಗಳು ಬಿಡುವ ಸಮಯದಲ್ಲಿ ರಸ್ತೆಯ ಮೇಲೆ ಒಂದೂವರೆ ಅಡಿಯಷ್ಟು ನೀರು ಹರಿದಿದ್ದು, ಶಾಲಾ ಮಕ್ಕಳು ಮನೆಗೆ ಹೋಗಲು ಪರದಾಡಿದರು.
ನಗರ ಮಧ್ಯ ಭಾಗದಿಂದ ಬರುವ ರಾಜಕಾಲುವೆ ತೇರಿನಬೀದಿಯ ಅರಳುಮಲ್ಲಿಗೆ ಬಾಗಿಲು ಮೂಲಕ ನಾಗರಕೆರೆ ಸೇರುತ್ತದೆ, ರಾಜಕಾಲುವೆ ಒತ್ತುವರಿಯಾಗಿದ್ದು, ಈಗ ಅದರ ಗಾತ್ರ ಕಿರಿದಾಗಿದೆ. 20 ನಿಮಿಷಗಳ ಕಾಲ ಭಾರಿ ಮಳೆಯಾದರೆ ನೀರಿನ ಹರಿವು ಹೆಚ್ಚಾಗಿ ರಸ್ತೆಯ ಮೇಲೆ ಹರಿಯುತ್ತಿದೆ. ಇದರ ಪರಿಣಾಮ ಗುರುವಾರ ಸುರಿದ ಮಳೆಯಲ್ಲೂ ಪುನರಾವರ್ತನೆಯಾಗಿದೆ.
ಮಳೆಯಿಂದ ಜಲಾವೃತವಾದ ತೇರಿನಬೀದಿ ರಸ್ತೆಯ ವಿಡಿಯೋ ಮಾಡಿ ಸ್ಥಳೀಯರಾದ ಚೇತನ್ ಮತ್ತು ಕೇಬಲ್ ರಾಮಚಂದ್ರಪ್ಪ ಎಂಬುವವರು ಸ್ಥಳೀಯ ವಾರ್ಡ್ ಸದಸ್ಯರು ಮತ್ತು ಜನಪ್ರತಿನಿಧಿಗಳು ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ, ತಾಲೂಕಿನಲ್ಲಿ ಹೇಳೋರು ಕೇಳೋರು ಇಲ್ಲದಂತಾಗಿದೆ, ಎಲೆಕ್ಷನ್ ಬಂದಾಗ ಮನೆ ಮುಂದೆ ಅಣ್ಣಾ, ಅಪ್ಪಾ ಅನ್ನೋರು ಈಗ ಎಲ್ಲಿ ಹೋಗಿದ್ದಾರೆಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.