

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕಳೆದ 15 ದಿನಗಳ ಹಿಂದಷ್ಟೆ ಬಿಸಿಲಿನ ತಾಪಕ್ಕೆ ಕಾದ ಕಾವಲಿಯಂತಾಗಿದ್ದ ಗ್ರಾಮಾಂತರ ಜಿಲ್ಲೆ ಕಳೆದೆರಡು ದಿನಗಳಿಂದ ಸಂಪೂರ್ಣ ಕೂಲ್ ಆಗಿದೆ.
40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದ್ದ ಬಿಸಿಲ ತಾಪಮಾನ ದಿಢೀರನೇ 22 ಡಿಗ್ರಿಗೆ ಇಳಿದಿದೆ. ಮುಂಜಾನೆಯಿಂದಲೇ ಮೋಡ ಮುಸುಕಿದ ವಾತಾವರಣದ ಜತೆಗೆ ಅಲ್ಲಲ್ಲಿ ತುಂತುರು ಮಳೆಯಾಗಿದ್ದು, ಬಿಸಿಲ ಬೇಗೆಗೆ ಬಿಸಿಯುಸಿರು ಬಿಡುತ್ತಿದ್ದ ಜನತೆ ತಂಪಾದ ವಾತಾವರಣ ಕಂಡು ಉಸ್ಸಪ್ಪ ಎನ್ನುವಂತಾಗಿದೆ.
ಕಳೆದ ನಾಲ್ಕೈದು ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಮೇ ತಿಂಗಳಲ್ಲೆ ವರ್ಷಧಾರೆ ಕಂಡು ಜಿಲ್ಲೆಯ ಜನ ಸಂತಸಗೊಂಡಿದ್ದಾರೆ. ಕಳೆದ 24 ಗಂಟೆ ಅವಧಿಯಲ್ಲಿ ಶೇ.504 ಮಳೆಯಾಗಿದೆ. ಅಂದರೆ ವಾಡಿಕೆಯಂತೆ ಮೇ ತಿಂಗಳ ಈ ಅವಧಿಯಲ್ಲಿ ವಾಡಿಕೆ ಮಳೆ 2.8 ಮಿ.ಮೀ ಇರುತ್ತದೆ ಆದರೆ ಈ ಬಾರಿ 16.9 ಮಿ.ಮೀ ಮಳೆ ಸುರಿದು ದಾಖಲೆ ನಿರ್ಮಿಸಿದೆ. ಕಳೆದೊಂದು ವಾರದಲ್ಲಿ ವಾಡಿಕೆ ಮಳೆ 22 ಮಿ.ಮೀ ಗಿಂತ 68 ಮಿ.ಮೀ ಅಂದರೆ ಶೇ.211 ಮಳೆ ಸುರಿದಿದೆ. ಮೇ ತಿಂಗಳ 20 ದಿನಗಳ ಅವಧಿಯಲ್ಲಿ ವಾಡಿಕೆ ಮಳೆ 55 ಮಿ.ಮೀ ಅದರೆ 109 ಮಿ.ಮೀ ಅಂದರೆ ಶೇ.100 ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗುಡುಗು ಸಹಿತ ಭರ್ಜರಿ ಮಳೆ: ಕಳೆದೊಂದು ವಾರದಿಂದ ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ಚದುರಿದಂತೆ ಮಳೆಯಾಗಿದೆ.ಅದರಲ್ಲೂ ಕಳೆದೆರಡು ದಿನದಿಂದ ದಾಖಲೆಯ ಮಳೆ ಸುರಿದಿದ್ದು, ಕೆರೆಕುಂಟೆಗಳಿಗೆ ಜೀವಕಳೆ ಬರುವಂತಾಗಿದೆ. ಗ್ರಾಮೀಣ ಭಾಗದ ಸಣ್ಣಪುಟ್ಟ ಕುಂಟೆಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಜಾನುವಾರುಗಳ ನೀರಿನ ಸಮಸ್ಯೆ ಬಗೆಹರಿದಂತಾಗಿದೆ.
ಮೇವಿನ ಕೊರತೆ ನೀಗಿಸಿದ ಮಳೆರಾಯ: ತೀವ್ರ ಬಿಸಿಲು ಹಾಗೂ ಮಳೆ ಕೊರತೆಯಿಂದಾಗಿ ಈ ಬಾರಿ ಜಿಲ್ಲೆಯಲ್ಲಿ ಜಾನುವಾರುಗಳ ಮೇವಿಗೆ ಸಂಕಷ್ಟ ಎದುರಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಸರ್ಕಾರ ವಿತರಿಸಿದ ಮೇವು ಕಿಟ್‌ಗಳಿಂದ ಹೇಗೂ ಮೇವಿನ ಬರ ನೀಗಿಸುವಲ್ಲಿ ಕೊಳವೆಬಾವಿ ಆಶ್ರಿಯ ರೈತರು ಬೆವರು ಹರಿಸಿದ್ದರು. ಆದರೆ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಮೀನುಗಳಲ್ಲಿ ತೇವಾಂಶ ಕೂಡಿಕೊಂಡಿದ್ದು, ಜಾನುವಾರುಗಳ ಮೇವಿಗೆ ಸಹಕಾರಿಯಾದಂತಾಗಿದೆ. ಮಳೆ ಹೀಗೆ ಮುಂದುವರೆದರೆ ಹಸಿರು ಮೇವಿಗೆ ಯಾವುದೇ ಕೊರತೆ ಇಲ್ಲದಂತಾಗುತ್ತದೆ. ಜಮೀನುಗಳಲ್ಲಿ ರಾಸುಗಳನ್ನು ಕಟ್ಟಿ ಹಸಿರು ಹುಲ್ಲು ಮೇಯಿಸುತ್ತಿರುವ ದೃಶ್ಯ ಕಂಡುಬರುತ್ತಿದೆ. ಹೈನುಗಾರಿಗೆ ಹುಲ್ಲು ಪೂರೈಸುವುದೇ ದೊಡ್ಡ ಸವಾಲು, ಇದಕ್ಕಾಗಿ ಬಾರಿ ವೆಚ್ಚವೇ ತಗಲುತ್ತದೆ, ಹಸಿರು ಹುಲ್ಲು ದೊರಕುತ್ತಿರುವುದರಿಂದ ರಾಸುಗಳ ನಿರ್ವಹಣೆ ವೆಚ್ಚವೂ ತಗ್ಗಿದಂತಾಗಿದೆ. ಬೇಸಿಗೆಯಲ್ಲಿ ಹುಲ್ಲಿನ ಕೊರತೆಯಿಂದ ಸಾಮಾನ್ಯವಾಗಿ ಹಾಲು ಉತ್ಪಾದನೆಯೂ ಕ್ಷೀಣಿಸುತ್ತದೆ. ಮಳೆರಾಯನ ಕೃಪೆಯಿಂದ ಹಾಲು ಉತ್ಪಾದನೆಗೂ ಸಹಕಾರಿಯಾದಂತಾಗಿದೆ.
ವಿದ್ಯುತ್ ಕಣ್ಣಾಮುಚ್ಚಾಲೆ: ಮಳೆ ಆರಂಭವಾಗುತ್ತಿದ್ದಂತೆ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿದ್ದರಿಂ ಸಾರ್ವಜನಿಕರು ಪರದಾಡುವಂತಾಯಿತು. ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಗಂಟೆಗಟ್ಟಲೆ ವಿದ್ಯುತ್ ಕಡಿತಗೊಂಡಿದ್ದರಿಂದ ರೈತಾಪಿ ಜನರು ತೀವ್ರ ಬೇಸರಗೊಳ್ಳುವಂತಾಯಿತು. ದೇವನಹಳ್ಳಿ ತಾಲೂಕಿನ ಕುಂದಾಣ, ಚನ್ನರಾಯಪಟ್ಟಣ, ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ, ಸೂಲಿಬೆಲೆ, ದೊಡ್ಡಬಳ್ಳಾಪುರ ತಾಲೂಕಿನ ಸಾಸಲು, ಮಧುರೆ, ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು, ದಾಬಸ್‌ಪೇಟೆ ಮತ್ತಿತರ ಕಡೆ ವಿದ್ಯುತ್ ಪೂರೈಕೆ ಅಸಮರ್ಪಕವಾಗಿದ್ದು ಸಾರ್ವಜನಿಕರು ಪರದಾಡುವಂತಾಗಿದೆ, ಕೆಲವು ಕಡೆಗಳಲ್ಲಿ ಮರದ ಕೊಂಬೆಗಳು ವಿದ್ಯುತ್ ಲೈನ್‌ಗಳ ಮೇಲೆ ಮುರಿದು ಬಿದ್ದಿರುವುದರಿಂದ ಬೆಸ್ಕಾಂ ಇಲಾಖೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿತ್ತು.
ಜಲಾವೃತಗೊಂಡ ರಸ್ತೆಗಳು: ಭಾರಿ ಮಳೆಗೆ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಯಿತು. ಸಂಜೆ ಕಚೇರಿ ಬಿಡುವ ಸಮಯಕ್ಕೆ ಸುರಿದ ಮಳೆಯಿಂದಾಗಿ ಬೆಂಗಳೂರು ಕಡೆಗೆ ಸಾಗುವ ಸಿಬ್ಬಂದಿ ಗಂಟೆಗಟ್ಟಲೆ ಅಂಗಡಿಮುಂಗಟ್ಟುಗಳ ಬಳಿ ನಿಂತು ಮಳೆಯಿಂದ ರಕ್ಷಣೆ ಪಡೆಯಲು ಪರದಾಡಿದರು. ನಗರ ಪ್ರದೇಶದಲ್ಲಿ ರಾಜಕಾಲುವೆಗಳು ಉಕ್ಕಿಹರಿದು ರಸ್ತೆಗಳು ಜಲಾವೃತಗೊಂಡಿದ್ದವು. ಇವುಗಳ ನಡುವೆ ದ್ವಿಚಕ್ರ ವಾಹನ ಸವಾರರು ಪರದಾಡುತ್ತಾ ಚಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಳೆಗಾಲಕ್ಕೂ ಮುನ್ನ ರಾಜಕಾಲುವೆ, ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಸಾರ್ವಜನಿಕರು ಮನವಿ ಮಾಡುತ್ತಲೆ ಬರುತ್ತಿದ್ದಾರೆ. ಆದರೆ ಎಂದಿನಂತೆ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಣ್ಣ ಮಳೆ ಸುರಿದರೂ ಚರಂಡಿ, ರಾಜಕಾಲುವೆಗಳಲ್ಲಿ ನೀರು ಉಕ್ಕಿ ರಸ್ತೆಗಳು ಜಲಾವೃತಗೊಳ್ಳುವುದು ಸಾಮಾನ್ಯವಾಗಿದೆ. ಈ ಬಾರಿ ಲೋಕಸಭಾ ಚುನಾವಣೆ ಎದುರಾಗಿದ್ದರಿಂದ ಅಧಿಕಾರಿ ವರ್ಗ ಸಂಪೂರ್ಣವಾಗಿ ಚುನಾವಣಾ ಕಾರ್ಯದಲ್ಲೆ ತೊಡಗಿಸಿಕೊಂಡಿತ್ತು. ಪರಿಣಾಮವಾಗಿ ಎಲ್ಲಿಯೂ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ದೊರೆಯಲಿಲ್ಲ.
ಭಾನುವಾರ ವಾಡಿಕೆಗಿಂತ 16.9 ಮಿ.ಮೀ ಹೆಚ್ಚು ಮಳೆಯಾಗಿದೆ, 24 ಗಂಟೆ ಅವಧಿಯಲ್ಲಿ ಸುರಿದ ಗರಿಷ್ಟ ಮಳೆ ಇದಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 2.8 ಮಿ.ಮೀ ವಾಡಿಕೆ ಮಳೆಯ ದಾಖಲೆ ಇದೆ. ಅದೇ ರೀತಿ ವಾರದಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆ ಪ್ರಮಾಣ ವಾಡಿಕೆಗಿಂತ 68 ಮಿ.ಮೀ ಹೆಚ್ಚು ಮಳೆಯಾಗಿದೆ. ಮೇ ತಿಂಗಳ ಅವಧಿಯಲ್ಲಿ ವಾಡಿಕೆ ಮಳೆ 55 ಮಿ.ಮೀ ಆದರೆ 20 ದಿನದ ಅವಧಿಯಲ್ಲಿ 109 ಮಿ.ಮೀ ಮಳೆಯಾಗಿದ್ದು, ಶೇ.100 ವರ್ಷಧಾರೆಯಾಗಿದೆ.
ಜಗದೀಶ್, ತಾಂತ್ರಿಕ ಅಧಿಕಾರಿ ಬೆಂ.ಗ್ರಾಮಾಂತರ