ಕೊಡಗಿನಲ್ಲಿ ಮಳೆಗಾಗಿ ಪೂಜೆ ಮಾಡುವ ಸ್ಥಿತಿ

18MDK05
Published on

ಮಡಿಕೇರಿ:

ಸಾಮಾನ್ಯವಾಗಿ ಮಳೆ ಕಡಿಮೆಯಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುವ ಮಾಡುವ ಪರಿಪಾಟ ಮೊದಲೆಲ್ಲಾ ಈ ಸಮಯದಲ್ಲಿ ಕೊಡಗಿನಲ್ಲಿ ಇರುತಿತ್ತು. ಆದರೆ ಈ ವರ್ಷ ಮಳೆಗಾಗಿ ಪ್ರಾರ್ಥಿಸುವ ಸ್ಥಿತಿ ಬಂದಿದೆ. ಮಳೆ ದೇವರು ಎಂದೇ ನಂಬಲಾಗುವ ಪಾಡಿ ಶ್ರೀ ಇಗ್ಗುತಪ್ಪನ ಸನ್ನಿಧಿಯಲ್ಲಿ ಗುರುವಾರ (ಆ.೧೭) ವಿಶೇಷ ಪೂಜೆ ಸಲ್ಲಿಸಿ ಮಳೆ ಕರುಣಿಸುವಂತೆ ಕೋರಿಕೆ ಸಲ್ಲಿಸಲಾಗಿದೆ. ಈ ತಿಂಗಳಿನಲ್ಲೂ ವರುಣ ಕರುಣೆ ತೋರಿಸದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ. ಭತ್ತದ ಉತ್ಪಾದನೆ ಮೇಲೆ ದೊಡ್ಡ ಮಟ್ಟದ ದುಷ್ಪರಿಣಾಮ ಬೀರಲಿದೆ.

ಗುರುವಾರದಿಂದ ಮಘ (ಆ.೧೭) ಮಳೆ ನಕ್ಷತ್ರ ಆರಂಭವಾಗಿದೆ. ’ಬಂದರೆ ಮಗೆ, ಹೋದರೆ ಹೊಗೆ’, ’ಬಂದರೆ ಮಘೆ, ಹೋದರೆ ಧಗೆ’ ಎನ್ನುವ ಜನಪದರ ನುಡಿಗಟ್ಟುಗಳು ಮಘ ಮಳೆಯ ಮಹತ್ವವನ್ನು ಹೇಳುತ್ತದೆ. ಮಘ ಮಳೆ ಸುರಿದಷ್ಟು ಕೃಷಿಗೆ ಒಳ್ಳೆಯದು ಎನ್ನುತ್ತಾರೆ ರೈತರು. ಸಾಮಾನ್ಯವಾಗಿ ಈ ವೇಳೆಗೆ ಮಳೆಯಾಶ್ರಿತ ಪ್ರದೇಶಗಳಲ್ಲಿ ಭತ್ತದ ನಾಟಿ ಕೆಲಸ ಪೂರ್ಣವಾಗಿ ಗದ್ದೆಗಳಲ್ಲಿ ಯಥೇಚ್ಛ ನೀರು ನಿಲ್ಲಿಸುವ ಸಮಯ. ಆದರೆ ಈ ವರ್ಷ ಮಳೆ ಕೈ ಕೊಟ್ಟಿದ್ದರಿಂದ ಬಹುತೇಕ ಪ್ರದೇಶಗಳಲ್ಲಿ ಇನ್ನು ಕೂಡ ನಾಟಿ ಆಗಿಲ್ಲ. ಗದ್ದೆಗಳಲ್ಲಿ ಸಿದ್ಧತೆ ನಡೆಸಿ, ಪೈರು ಬೆಳೆಸಿಕೊಂಡು ಅನ್ನದಾತರು ಮಳೆಗಾಗಿ ಆಕಾಶ ಕಡೆಗೆ ನೋಡುತ್ತಿದ್ದಾರೆ. ಆದರೆ ಮಳೆ ಬರುವಂತಹ ಲಕ್ಷಣಗಳು ಕಾಣುತ್ತಿಲ್ಲ ಎನ್ನುತ್ತಾರೆ ಹವಾಮಾನ ತಜ್ಞರು.

ಅಂಕಿ ಅಂಶಗಳ ಪ್ರಕಾರ ಕೊಡಗಿನ ಇತಿಹಾಸದಲ್ಲೇ ಕಕ್ಕಡ ಮಾಸದಲ್ಲಿ ಮಳೆಯ ಕೊರತೆ ಇದೆ ಮೊದಲು ಎನ್ನಲಾಗುತ್ತಿದೆ. ಇದು ಭತ್ತದ ಕೃಷಿ ಮೇಲೆ ನೇರ ಪರಿಣಾಮ ಬೀರುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಬಹುತೇಕ ಕೃಷಿಕರು ಭತ್ತದ ಕೃಷಿಯಿಂದ ವಿಮುಖರಾಗುತ್ತಿದ್ದು, ಗದ್ದೆಗಳು ಪಾಳು ಬಿಡಲಾಗಿದೆ. ಕೃಷಿ ಕಾರ್ಮಿಕರ ಕೊರತೆ, ಏರುತ್ತಿರುವ ಭತ್ತ ಕೃಷಿ ವೆಚ್ಚ, ಸರಿಯಾದ ಬೆಲೆ ಸಿಗದಿರುವುದು ಮತ್ತಿತರ ಕಾರಣಗಳಿಂದ ಹೆಚ್ಚಿನ ಕಡೆಗಳಲ್ಲಿ ರೈತರು ಭತ್ತ ಬೆಳೆಯುವುದನ್ನೇ ಬಿಟ್ಟಿದ್ದರು. ಈ ವರ್ಷ ಮಳೆಯ ಕೊರತೆ ಇನ್ನಷ್ಟು ರೈತರನ್ನು ಭತ್ತ ಬೆಳೆಯದಂತೆ ಮಾಡಲಿದೆ. ಪಾಳು ಬೀಳುವ ಜಾಗದ ಪ್ರಮಾಣವೂ ಹೆಚ್ಚಾಗಲಿದೆ.

ಕೊಡಗಿನ ಆರ್ಥಿಕ ಪರಿಸ್ಥಿತಿ ನಿರ್ಧರಿಸುವ ಕಾಫಿ, ಕರಿಮೆಣಸು, ಏಲಕ್ಕಿ ಬೆಳೆಗಳ ಮೇಲೂ ಮಳೆಯ ಅಭಾವ ಪರಿಣಾಮ ಬೀರಲಿದೆ. ಕರಿಮೆಣಸು ಕಾಯಿಕಟ್ಟುವ ಸಮಯದಲ್ಲಿ ಮಳೆ ನೀರಿನ ಅಗತ್ಯ ಹೆಚ್ಚು ಬೇಕಾಗುತ್ತದೆ ಎನ್ನುತ್ತಾರೆ ಅನುಭವಿ ಕೃಷಿಕರು.
ಮಳೆ ಸಮೃದ್ಧವಾಗಿದ್ದ ವರ್ಷಗಳಲ್ಲಿ ಆಗಸ್ಟ್ ತಿಂಗಳ ಮಧ್ಯಭಾಗದಲ್ಲಿ ಶೇ.೮೦ರಷ್ಟು ಭತ್ತದ ನಾಟಿ ಕಾರ್ಯ ಪೂರ್ಣಗೊಂಡಿರುತ್ತಿತ್ತು. ಆದರೆ ಈ ವರ್ಷ ಶೇ. ೩೫ರಷ್ಟು ಪ್ರದೇಶದಲ್ಲಿ ಮಾತ್ರ ಭತ್ತದ ನಾಟಿ ಆಗಿದೆ ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿ. ಬಹುತೇಕ ಮಳೆಯಾಶ್ರಿತ ಪ್ರದೇಶಗಳನ್ನು ಹೊಂದಿರುವ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ೧,೬೦೦ ಹೆಕ್ಟೇರ್‌ನಲ್ಲಿ ಮಾತ್ರ ಭತ್ತದ ನಾಟಿಯಾಗಿದ್ದು ಶೇ.೨೬ ರಷ್ಟು ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ವಿರಾಜಪೇಟೆ ತಾಲೂಕಿನಲ್ಲಿ ೯,೭೯೩ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಆಗಿದ್ದು ಶೇ. ೩೩.೭ರಷ್ಟು ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಹಾರಂಗಿ ಮತ್ತು ಚಿಕ್ಲಿಹೊಳೆ ಜಲಾಶಯದ ಅಚ್ಚುಕಟ್ಟು ಪ್ರದೇಶ ಹೊಂದಿರುವ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕುಗಳಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ.

ಮಳೆಯ ಕೊರತೆ ಕೊಡಗು, ಹಾಸನ ಹಾಗೂ ಮೈಸೂರು ಜಿಲ್ಲೆಗಳ ಕೃಷಿ ಜಮೀನಿಗೆ ನೀರೊದಗಿಸುವ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯದ ಮೇಲೂ ಪರಿಣಾಮ ಬೀರಿದೆ. ವರ್ಷಂಪ್ರತಿ ರೈತರ ಜಮೀನಿಗೆ ಯಥೇಚ್ಛವಾಗಿ ನೀರು ಹರಿಸಲಾಗುತ್ತಿತ್ತು. ಆದರೆ ಈ ವರ್ಷ ಕಟ್ಟು ಪದ್ಧತಿ ಅನುಸರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ೧೫ ದಿನ ನೀರು ಹರಿಸಿದರೆ ಮತ್ತೆ ೧೫ ದಿನ ನೀರು ನಿಲ್ಲಿಸಲಾಗುವುದು. ಇದರಿಂದ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದಲ್ಲಿ ಇರುವ ರೈತರಿಗೆ ಸಮಸ್ಯೆ ಆಗುವ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ ಈ ಬಾರಿ ಭತ್ತದ ಇಳುವರಿ ಭಾರಿ ಪ್ರಮಾಣದಲ್ಲಿ ಕುಸಿಯುವ ಆತಂಕವೂ ಕಂಡುಬಂದಿದೆ.

ಸಾಮಾನ್ಯವಾಗಿ ಆಗಸ್ಟ್ ತಿಂಗಳಿನಲ್ಲಿ ಜೋರು ಮಳೆ ಇರುತ್ತದೆ. ಬಿಸಿಲು ಕಾಣುವುದೇ ಅಪರೂಪ ಎನ್ನುವ ವಾತಾವರಣ ಕಂಡುಬರುತ್ತಿರುತ್ತದೆ. ಭಾಗಮಂಡಲ ಸೇರಿ ಹಲವೆಡೆ ಪ್ರವಾಹ ಬಂದ ನಂತರ ವಿಶೇಷ ಪೂಜೆ ಸಲ್ಲಿಸಿ ಶಾಂತವಾಗುವಂತೆ ವರುಣನಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಆದರೆ ಈ ವರ್ಷ ಪರಿಸ್ಥಿತಿ ಉಲ್ಟಾ ಆಗಿದೆ. ಆಟಿ ತಿಂಗಳಿನಲ್ಲಿ ಇತಿಹಾಸದಲ್ಲಿ ಮೊದಲು ಎಂಬಂತೆ ಬಿಸಿಲು ಝಳಪಿಸುತ್ತಿದೆ. ಶೇ. ೫೦ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯ ಕೊರತೆ ಕಾಣಿಸಿಕೊಂಡಿದೆ. ಹಾಗಾಗಿ ಇದೇ ಮೊದಲ ಬಾರಿಗೆ ಮಳೆಗಾಗಿ ಆಗಸ್ಟ್ ತಿಂಗಳಿನಲ್ಲಿ ಜನರು ಜಿಲ್ಲೆಯಲ್ಲಿ ಮಳೆ ಬೆಳೆ ದೇವರು ಎಂದು ಖ್ಯಾತಿ ಹೊಂದಿರುವ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪನ ಮೊರೆ ಹೋಗಿದ್ದಾರೆ. ಕೊಡವರ ಮಾತೃ ಸಂಸ್ಥೆ ಅಖಿಲ ಕೊಡವ ಸಮಾಜ ನೇತೃತ್ವದಲ್ಲಿ ವಿವಿಧ ಕೊಡವ ಸಮಾಜ ಹಾಗೂ ಸಂಘಟನೆಗಳು ಇಗ್ಗುತಪ್ಪನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪೂಜೆ ನೆರವೇರಿಸಿದ್ದಾರೆ. ಭಕ್ತರ ನಂಬಿಕೆಗೆ ಪೂರಕವಾಗಿ ದೇವರಿಗೆ ಪೂಜೆ ಸಲ್ಲಿಸುತ್ತಿದ್ದಂತೆಯೇ ಜಿಲ್ಲೆಯ ವಿವಿಧೆಡೆ ಮಳೆಯ ವರದಿಯಾಗಿದೆ. ಹಾಗಾಗಿ ಎಲ್ಲವೂ ಒಳಿತೇ ಆಗಲಿದೆ ಎನ್ನುವ ನಂಬಿಕೆ ಭಕ್ತರದ್ದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net