

ಕೋಲಾರ: ತಾಲೂಕಿನಾದ್ಯಂತ ಗುಡುಗು ಸಹಿತ ಮಳೆಯಾಗಿದ್ದು, ರಾಜಕಲ್ಲಹಳ್ಳಿಯಲ್ಲಿ ಗಾಳಿ ಮಳೆಗೆ ಒಂದೂವರೆ ಎಕರೆ ಪ್ರದೇಶದಲ್ಲಿ ಹಾಕಿದ್ದ ನೆರಳು ಪರದೆ ಧರಾಶಾಹಿಯಾಗಿದೆ.
ನಗರದಲ್ಲಿ ಶುಕ್ರವಾರ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಮಳೆ ಮುನ್ಸೂಚನೆ ನೀಡಿತ್ತು. ನಿರೀಕ್ಷೆಯಂಥೆ ಸಂಜೆ ಸುಮಾರು 5.30ರ ವೇಳೆಗೆ ತುಂತುರು ಮಳೆ ಆರಂಭವಾಗಿ ನಂತರ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ರಾತ್ರಿವರೆಗೂ ಮುಂದುವರಿದಿತ್ತು.
ಇದರಿಂದಾಗಿ ಮಳೆ ನೀರು ಚರಂಡಿ ತುಂಬಿ ಹರಿದು ಕೆಇಬಿ ಸಮುದಾಯ ಭವನದ ಬಳಿ ರಸ್ತೆ ಮೇಲೆ ಹರಿದರೆ, ಚಿಕ್ಕಬಳ್ಳಾಪುರ ರಸ್ತೆಯ ರಹಮತ್ ನಗರ ಸುತ್ತಮುತ್ತಲ ವಾರ್ಡ್‌ಗಳಲ್ಲಿನ ತಗ್ಗು ಪ್ರದೇಶದಲ್ಲಿ ಚರಂಡಿ, ರಸ್ತೆ ಒಂದೇ ಆಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ಓಡಾಡಕ್ಕೆ ಪರದಾಡುವಂತಾಗಿತ್ತು.
ವೇಮಗಲ್ ಹೋಬಳಿಯ ರಾಜಕಲ್ಲಹಳ್ಳಿಯಲ್ಲಿ ಬಿರುಗಾಳಿಗೆ ರೈತ ಸುರೇಶ್ ಎಂಬುವರು ಒಂದೂವರೆ ಎಕರೆ ಪ್ರದೇಶದಲ್ಲಿ ನೆರಳು ಪರದೆ ಹಾಕಿ 15,000 ಕ್ಯಾಪ್ಸಿಕಂ ನಾರು ನಾಟಿ ಮಾಡಿದ್ದರು. ಸಂಜೆ 4.30ರ ವೇಳೆ ಬೀಸಿದ ಗಾಳಿಗೆ ನೆರಳು ಪರದೆ ಬಿದ್ದು ಫಸಲು ನಾಶವಾಗಿದೆ. ಕೆಲ ದಿನಗಳ ಹಿಂದಷ್ಟೇ ಮಂಡಿಗೆ ಸ್ಯಾಂಪಲ್ ಹಾಕಿದ್ದರು. ಫಸಲು ಕಟಾವು ಆಗುವ ಮುನ್ನವೇ ಬೆಳೆ ನಷ್ಟವಾಗಿರುವ ಬಗ್ಗೆ ಅವಲತ್ತುಕೊಂಡಿದ್ದಾರೆ.
ಶ್ರೀನಿವಾಸಪುರದಲ್ಲಿ ಮಳೆಗಿಂತಲೂ ಗುಡುಗು, ಮಿಂಚಿನ ಆರ್ಭಟ ಜೋರಾಗಿತ್ತು. ಮುಳಬಾಗಲಿನಲ್ಲೂ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಬಿದ್ದಿದೆ.
ಮಾಲೂರು ತಾಲೂಕಿನ ಅಬ್ಬೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕೊರಚನೂರು ಬಳಿ ಗುರುವಾರ ರಾತ್ರಿ ಬಿದ್ದ ಗಾಳಿ ಮಳೆಗೆ 3 ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ಗ್ರಾಮದ ರೈತ ರುದ್ರಶಂಕರ್ ಬೆಳೆದಿರುವ ಚಿಕ್ಕಡಿ ಬೆಳೆ ನಾಶವಾಗಿದೆ.