

ಮಡಿಕೇರಿ:
’ಈ ವರ್ಷ ಯಾಕೋ ಬರದ ಛಾಯೆ ಕಾಣಿಸುತ್ತಿದೆ,’ ಎಂದು ಕೊಡಗಿನ ಅನುಭವಿ ಕೃಷಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ’ಸಂಜೆ ಹೊತ್ತು ಗುಡುಗು, ಸಿಡಿಲಿನ ಜತೆಗೆ ಕಾಣಿಸಿಕೊಳ್ಳುತ್ತಿರುವ ಮಳೆ ಇಂಥ ಸಮಯದಲ್ಲಿ ಒಳ್ಳೆಯ ಲಕ್ಷಣ ಅಲ್ಲ,’ ಎನ್ನುವ ಹವಾಮಾನ ತಜ್ಞರ ಮಾತು ಕೂಡ ರೈತರ ಅನುಭವದ ಮಾತಿಗೆ ಪುಷ್ಠಿ ಕೊಡುವಂತಿದೆ. ಬಿಟ್ಟೂ ಬಿಡದೆ ಮಳೆ ಸುರಿಯಬೇಕಿದ್ದ ಆಗಸ್ಟ್ ೨ನೇ ವಾರದಲ್ಲೂ ಮಡಿಕೇರಿ, ಭಾಗಮಂಡಲದಂತಹ ಪ್ರದೇಶದಲ್ಲಿ ಬೇಸಿಗೆಯನ್ನು ನಾಚಿಸುವಂತೆ ಕಾಣಿಸಿಕೊಳ್ಳುತ್ತಿರುವ ಬಿಸಿಲಿನ ಝಳ ಚಿಂತಿಸುವಂತೆ ಮಾಡಿದೆ.
’ಅಸಲೆ ಮಳೆ ಕೈ ತುಂಬಾ ಬೆಳೆ…’ ಇದು ಆಶ್ಲೇಷ ಮಳೆ ಬಗ್ಗೆ ರೈತಾಪಿ ವರ್ಗದಲ್ಲಿ ಜನಪ್ರಿಯವಾಗಿರುವ ಗಾದೆ ಮಾತು. ಆ.೩ರಿಂದ ಆ.೧೫ರ ತನಕ ಆಶ್ಲೇಷ ಮಳೆ ನಕ್ಷತ್ರದ ಅವಧಿ. ಸಾಮಾನ್ಯವಾಗಿ ಈ ಅವಧಿಯಲ್ಲಿ ಕೊಡಗಿನಲ್ಲಿ ಭಾರಿ ಮಳೆ ಆಗುತ್ತದೆ. ೨೦೧೮ ಮತ್ತು ಅಲ್ಲಿಂದ ಈಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪ, ಅತಿವೃಷ್ಠಿಯ ಅನಾಹುತಗಳು ಇದೇ ಅವಧಿಯ ಆಸುಪಾಸಿನಲ್ಲಿ ಸಂಭವಿಸಿದೆ. ಹಾಗಾಗಿ ಆಗಸ್ಟ್ ಎಂದರೆ ಸಾಕು ಜಿಲ್ಲೆಯ ಜನತೆ ಮಳೆಯ ಅಬ್ಬರ ನೆನಪಿಸಿಕೊಂಡು ಬೆಚ್ಚಿಬೀಳುವ ಸ್ಥಿತಿ ಇತ್ತು. ಆದರೆ ಈ ವರ್ಷ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಳೆಯ ದಿನಗಳಲ್ಲೂ ಬಿಸಿಲ ತಾಪ ಕಂಡು ಬರುತ್ತಿದೆ.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಮಾಹಿತಿ ಪ್ರಕಾರ ಕೊಡಗಿನಲ್ಲಿ ವಾಡಿಕೆಯ ೧೮೮೨ ಮಿಮೀ ಮಳೆ ಆಗಬೇಕಿದ್ದಲ್ಲಿ ಈ ವರ್ಷ ಸುಮಾರು ಶೇ.೪೦ರಷ್ಟು ಕಡಿಮೆ ಅಂದರೆ ೧೧೩೨ ಮಿಮೀ ಮಳೆ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೨೫೩೦.೦೧ ಮಿ.ಮೀ. ಮಳೆ ಆಗಿತ್ತು. ಮಡಿಕೇರಿ ತಾಲೂಕಿನಲ್ಲಿ ೨೩೬೫.೨೧ ಮಿ.ಮೀ. ಮಳೆಯಾಗಿದ್ದರೆ ಕಳೆದ ವರ್ಷ ೩೬೨೭.೭೯ ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲೂಕಿನಲ್ಲಿ ೧೧೬೦.೦೫ ಮಿ.ಮೀ. ಮಳೆಯಾಗಿದ್ದು ಕಳೆದ ವರ್ಷ ೧೯೩೮.೧೪ ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ೧೨೮೯.೦೬ ಮಿ.ಮೀ. ಮಳೆ ಬಂದಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ೨೦೨೪.೧೧ ಮಿ.ಮೀ. ಮಳೆಯಾಗಿತ್ತು.
ಕೊಡಗಿನಲ್ಲಿ ವಾಡಿಕೆಯ ಮಳೆಯಾಗದ ಕಾರಣ ಜೀವನದಿ ಕಾವೇರಿಯಲ್ಲಿ ನೀರಿನ ಹರಿವಿನ ಪ್ರಮಾಣ ಕುಸಿದಿದೆ. ಕಳೆದ ತಿಂಗಳು ಸುರಿದ ಮಳೆಯ ಸಂದರ್ಭ ತುಂಬಿ ಹರಿದಿದ್ದ ನದಿಯಲ್ಲಿ ಈಗ ನೀರಿನ ಮಟ್ಟ ಬೇಸಿಗೆಯಲ್ಲಿ ಇದ್ದಂತಿದೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರು ತೀರಾ ಕಡಿಮೆ ಇದೆ. ಮಳೆ ಕಡಿಮೆ ಆಗಿದ್ದರಿಂದ ಜಲ ಒರತೆಗಳು ಹುಟ್ಟಿಕೊಂಡಿಲ್ಲ. ಹಾಗಾಗಿ ನದಿಯಲ್ಲಿ ನೀರಿನ ಹರಿವು ಕ್ಷೀಣಿಸಿದೆ. ಲಕ್ಷ್ಮಣತೀರ್ಥ ಸೇರಿದಂತೆ ಜಿಲ್ಲೆಯ ಪ್ರಮುಖ ನದಿಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಇದರಿಂದಾಗಿ ಮಳೆಯಾಶ್ರಿತ ಭತ್ತ ಬೆಳೆಯುವ ರೈತರು ವರ್ಷದ ದುಡಿಮೆ ಕಳೆದುಕೊಳ್ಳುವ ಹಂತ ತಲುಪುವ ಆತಂಕದಲ್ಲಿದ್ದಾರೆ.
ಜಲಾನಯನ ಪ್ರದೇಶದಲ್ಲಿ ಮಳೆ ಕ್ಷೀಣವಾಗಿರುವ ಕಾರಣ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿಯ ಒಳಹರಿವು ದಿನದಿಂದ ದಿನಕ್ಕೆ ಇಳಿಕೆ ಆಗುತ್ತಿದೆ. ಗುರುವಾರ (ಆ.೧೦) ಮಾಹಿತಿ ಪ್ರಕಾರ ಅಣೆಕಟ್ಟೆಗೆ ಕೇವಲ ೧೨೫೫ ಕ್ಯೂಸೆಕ್ ನೀರಿನ ಒಳಹರಿವು ಇದೆ. ಕಳೆದ ವರ್ಷ ೩,೮೬೦ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ನದಿಗೆ ೧,೮೯೧ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ವ್ಯವಸಾಯದ ಉದ್ದೇಶಕ್ಕೆ ಇನ್ನೂ ಕಾಲುವೆಗೆ ನೀರು ಬಿಟ್ಟಿಲ್ಲ. ಕಳೆದ ವರ್ಷ ಇದೇ ಅವಧಿಯಲ್ಲಿ ೩,೮೬೦ ಕ್ಯೂಸೆಕ್ ನೀರಿನ ಒಳಹರಿವು ಇತ್ತು. ನದಿಗೆ ೮ ಸಾವಿರ ಕ್ಯೂಸೆಕ್, ಕಾಲುವೆಗೆ ೧೦೦ ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು.
೨೮೫೯ ಅಡಿ ಎತ್ತರದ ಅಣೆಕಟ್ಟೆಯಲ್ಲಿ ಪ್ರಸ್ತುತ ೨೮೫೮.೫೪ ಅಡಿಗಳಷ್ಟು ನೀರಿದೆ. ೮.೫ ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ೭.೫೯೮ ಟಿಎಂಸಿ ಬಳಕೆಯೋಗ್ಯ ನೀರು ಸಂಗ್ರಹವಾಗಿದೆ. ಕಳೆದ ವರ್ಷ ೨೮೫೪.೧೩ ಅಡಿಗಳಷ್ಟು ಪ್ರಮಾಣದಲ್ಲಿ ನೀರಿತ್ತು. ೬.೧೦೧ ಟಿಎಂಸಿಗಳಷ್ಟು ನೀರಿನ ಸಂಗ್ರಹ ಇತ್ತು. ಈ ಬಾರಿ ಒಟ್ಟು ೧೬.೪೧೫ ಟಿಎಂಸಿ ನೀರು ಹರಿದು ಜಲಾಯಕ್ಕೆ ಹರಿದು ಬಂದಿದೆ. ೧೦.೪೪೨ ಟಿಎಂಸಿ ನೀರು ನದಿಯ ಮೂಲಕ ಕೆಆರ್‌ಎಸ್ ಕಡೆಗೆ ಹರಿದಿದೆ. ಹಾರಂಗಿ ಜಲಾಶಯದಿಂದ ೧೮ ಟಿಎಂಸಿ ನೀರು ಅಚ್ಚುಕಟ್ಟು ಪ್ರದೇಶದಲ್ಲಿ ವ್ಯವಸಾಯದ ಬಳಕೆಗೆ ಬೇಕು. ಜಲಾಶಯದಲ್ಲಿ ಹಾಲಿ ಸುಮಾರು ೭.೫ ಟಿಎಂಸಿ ನೀರು ಇದೆ ಎಂದು ಅಂದಾಜಿಸಿದರೂ ಇನ್ನೂ ೧೦.೫ ಟಿಎಂಸಿ ನೀರಿನ ಅಗತ್ಯವಿದೆ.
ಹವಾಮಾನ ತಜ್ಞರ ಮಾಹಿತಿ ಪ್ರಕಾರ ಇನ್ನೂ ಹತ್ತು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯಲಿದೆ. ಅಲ್ಲಲ್ಲಿ ಗುಡುಗು ಸಹಿತ ಸಾಧಾರಣ ಮಳೆ ಆಗಬಹುದು. ಕೆಲವೊಂದು ಭಾಗದಲ್ಲಿ ಸುಮಾರು ೧ ಇಂಚುಗಳಷ್ಟು ಮಳೆ ಸುರಿಯುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಅವರು. ಆದರೆ ಇದು ಸದೃಢ ಮುಂಗಾರಿನ ಲಕ್ಷಣದಂತೆ ಕಂಡುಬರುತ್ತಿಲ್ಲ. ಮುಂಗಾರು ಮಳೆಯ ಕೊನೆಯ ದಿನಗಳ ವಾತಾವರಣದಂತೆ ಇದೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಮಳೆಗೆ ಕಾರಣವಾಗುವ ಯಾವುದೇ ಅಂಶಗಳು ಸಮುದ್ರದಲ್ಲಿ ಇರುವ ಸೂಚನೆಗಳೂ ಸಿಗುತ್ತಿಲ್ಲ. ಇಂತಹ ವಾತಾವರಣ ಸೃಷ್ಟಿಯಾದ ನಂತರ ಮಳೆಯ ನಿರೀಕ್ಷೆ ಮಾಡಬಹುದಾಗಿದೆ. ಆದರೆ ಅಷ್ಟರಲ್ಲಿ ಮಳೆಗಾಲ ಹೊರಟುಹೋಗಿರುತ್ತದೆ. ಹಾಗಾಗಿ ಬರದ ಸಾಧ್ಯತೆಗಳೇ ಹೆಚ್ಚು ಎನ್ನುವ ವಿಶ್ಲೇಷಣೆಗಳು ನಡೆಯುತ್ತಿದೆ.