ಕೊಡಗಿನಲ್ಲಿ ಮುಂದುವರಿದ ಮಳೆಯ ಅಬ್ಬರ

24mdk02
Published on

ಮಡಿಕೇರಿ:

ಕೊಡಗಿನಲ್ಲಿ ಪುಷ್ಯ ಮಳೆಯ ಅಬ್ಬರ ಮುಂದುವರಿದಿದೆ. ಮಂಗಳವಾರ ಬೆಳಗ್ಗೆ 8.30ರ ತನಕ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಮುಂದುವರಿಸಲಾಗಿದೆ. ಭಾರಿ ಮಳೆ ಇರುವುದರಿಂದ ಮಂಗಳವಾರವೂ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜು ಹೊರುಪಡಿಸಿ ಕೊಡಗಿನ ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಒಂದಾಗಿರುವ ಭಾಗಮಂಡಲದಲ್ಲಿ ಸೋಮವಾರ ಮಧ್ಯಾಹ್ನ ಸ್ವಲ್ಪ ಬಿಡುವು ಕೊಟ್ಟಿರುವುದು ಹೊರತುಪಡಿಸಿದರೆ ಜೋರು ಮಳೆ ಮುಂದುವರಿದಿದೆ. ಭಾಗಮಂಡಲಕ್ಕೆ ನಾಪೋಕ್ಲು ಮತ್ತು ಮಡಿಕೇರಿಯಿಂದ ಸಂಪರ್ಕ ಕಲ್ಪಿಸುವ ರಸ್ತೆಗಳು ಪ್ರವಾಹದ ನೀರಿನಲ್ಲಿ ಮುಳುಗಿದೆ. ತ್ರಿವೇಣಿ ಸಂಗಮ ಜಲಾವೃತವಾಗಿದೆ. ನದಿ ನೀರು ಶ್ರೀ ಭಗಂಡೇಶ್ವರ ದೇವಾಲಯದ ಮೆಟ್ಟಿಲುಗಳ ಬಳಿ ತಲುಪಿದೆ. ಇಲ್ಲಿ ವಾಹನ ಓಡಾಟ ಸ್ಥಗಿತವಾಗಿದ್ದು, ಸಾರ್ವಜನಿಕರು ತಿರುಗಾಡಲು ಅಪೂರ್ಣ ಮೇಲ್ಸೇತುವೆ ಬಳಸುತ್ತಿದ್ದಾರೆ.

ಕಾವೇರಿ, ಲಕ್ಷö್ಮತೀರ್ಥ, ಹಾರಂಗಿ ಸೇರಿದಂತೆ ಜಿಲ್ಲೆಯ ಪ್ರಮುಖ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಜಿಲ್ಲೆಯ ಎಲ್ಲಾ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದೆ. ಭಾಗಮಂಡಲ ಹೋಬಳಿಯಲ್ಲಿ ಅತಿ ಹೆಚ್ಚು ಅಂದರೆ 197.40 ಮಿಮೀ ಮಳೆಯಾಗಿದೆ.

ವಿರಾಜಪೇಟೆ, ಗೋಣಿಕೊಪ್ಪ, ನಾಪೋಕ್ಲು, ಮಡಿಕೇರಿ, ಸೋಮವಾರಪೇಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಸ್ವಲ್ಪ ಕಡಿಮೆ ಇತ್ತು. ಮಳೆಯ ಜತೆ ಗಾಳಿಯೂ ಇರುವುದರಿಂದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮರಗಳು ಉರುಳಿ ಬಿದ್ದಿವೆ. ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ. ಸೆಸ್ಕ್ ಸಿಬ್ಬಂದಿ ಮಳೆಯ ನಡುವೆಯೂ ಕಾರ್ಯನಿರ್ವಹಿಸುತ್ತಾ ಸಮರ್ಪಕ ವಿದ್ಯುತ್ ಪೂರೈಕೆಗೆ ಶ್ರಮಿಸುತ್ತಿದ್ದಾರೆ.
2019, 20ರಲ್ಲಿ ಭಾರಿ ಪ್ರವಾಹಕ್ಕೆ ತುತ್ತಾಗಿದ್ದ ಕುಶಾಲನಗರದಲ್ಲಿ ಈ ವರ್ಷವೂ ಪ್ರವಾಹದ ಆತಂಕ ಇತ್ತಾದರೂ ಹಾರಂಗಿಯಲ್ಲಿ ನೀರಿನ ನಿರ್ವಹಣೆಗೆ ಮಹತ್ವ ಕೊಟ್ಟಿದ್ದರಿಂದ ಸದ್ಯದ ಮಟ್ಟಿಗೆ ಅಂತಹ ಯಾವುದೇ ಸಮಸ್ಯೆ ಕಂಡುಬರುತ್ತಿಲ್ಲ. ಆದರೂ ಮಳೆ ಹೆಚ್ಚಾಗಿ ಪ್ರವಾಹ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪಟ್ಟಣದಲ್ಲಿ ತಗ್ಗುಪ್ರದೇಶದಲ್ಲಿ ವಾಸಿಸುವ ಜನರಿಗೆ ಪುರಸಭೆ ವತಿಯಿಂದ ಮೈಕ್ ಮೂಲಕ ಮನವಿ ಮಾಡಿಕೊಳ್ಳಲಾಗುತ್ತಿದೆ.

ಕೊಡಗಿನಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 118.77 ಮಿ.ಮೀ. ಮಳೆ ಬಂದಿದೆ. ಕಳೆದ ವರ್ಷ ಇದೇ ದಿನ 14.02 ಮಿ.ಮೀ. ಮಾತ್ರ ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1310.47 ಮಿ.ಮೀ. ಮಲೆ ಸುರಿದಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 1869.78 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ 173.43 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 76.25 ಮಿ.ಮೀ., ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 106.63 ಮಿ.ಮೀ. ಸರಾಸರಿ ಮಳೆಯಾಗಿದೆ.

ಹೋಬಳಿವಾರು ಮಡಿಕೇರಿ ಕಸಬಾ 158.60, ನಾಪೋಕ್ಲು 151.20, ಸಂಪಾಜೆ 186.50, ಭಾಗಮಂಡಲ 197.40, ವಿರಾಜಪೇಟೆ ಕಸಬಾ 68.40, ಹುದಿಕೇರಿ 87.60, ಶ್ರೀಮಂಗಲ 91, ಪೊನ್ನಂಪೇಟೆ 85, ಅಮ್ಮತ್ತಿ 69.50, ಬಾಳೆಲೆ 56, ಸೋಮವಾರಪೇಟೆ ಕಸಬಾ 134.20, ಶನಿವಾರಸಂತೆ 89.60, ಶಾಂತಳ್ಳಿ 215, ಕೊಡ್ಲಿಪೇಟೆ 78, ಕುಶಾಲನಗರ 47, ಸುಂಟಿಕೊಪ್ಪ 76 ಮಿ.ಮೀ.ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net