ತಡವಾದ ಮುಂಗಾರು, ಕೃಷಿಗೆ ತೊಡರು

19mdk06
Published on

ಮಡಿಕೇರಿ:

’ಆರಿದ್ರಾ ಬಾರದಿದ್ದರೆ ದರಿದ್ರ,’ ಇದು ಗ್ರಾಮೀಣರಲ್ಲಿ ಇರುವ ಪ್ರಸಿದ್ಧ ಗಾದೆ ಮಾತು. ಬುಧವಾರಕ್ಕೆ (ಜೂ.೨೧) ಮೃಗಶಿರಾ ಮಳೆ ಮುಗಿದು ಗುರುವಾರದಿಂದ ಆರಿದ್ರಾ ಮಳೆ ಶುರುವಾಗುತ್ತಿದೆ. ಈ ಮಳೆಯೂ ಆಕಾಶದಲ್ಲೇ ಕರಗಿ ಹೋದರೆ ಗಾದೆ ಮಾತು ಅಕ್ಷರಶಃ ಸತ್ಯವಾಗುವ ಎಲ್ಲಾ ಲಕ್ಷಣಗಳಿವೆ. ಇಷ್ಟರಲ್ಲಾಗಲೇ ಮೈ ತುಂಬಿಕೊಳ್ಳಬೇಕಿದ್ದ ಕಾವೇರಿ ಇನ್ನೂ ಬಡಕಲಾಗಿಯೇ ಹರಿಯುತ್ತಿದ್ದಾಳೆ. ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹ ತಳ ಸೇರಿದ್ದು, ಸುಮಾರು ೧.೮ ಟಿಎಂಸಿಯಷ್ಟೇ ಬಳಕೆಗೆ ಯೋಗ್ಯ ನೀರು ಲಭ್ಯವಿದೆ. ಈ ಮಧ್ಯೆ ಜೂ. ೨೨ರಿಂದ ಮಳೆ ಜೋರಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ಒಂದಿಷ್ಟು ಆಶಾಭಾವನೆ ಮೂಡಿಸಿದೆ.

ಕಳೆದ ೧೦ ದಿನಗಳಿಂದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇದೆ. ಆದರೆ ಅಲ್ಲಲ್ಲಿ ಮಾತ್ರ ಚದುರಿದಂತೆ ಮಳೆಯಾಗುತ್ತಿದೆ. ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಮಾಹಿತಿ ಪ್ರಕಾರ ಜಿಲ್ಲೆಯ ಶೇ. ೨೦ ಭಾಗದಲ್ಲಿ ಮಾತ್ರ ಮಳೆ ಬಂದಿದೆ. ಗ್ರಾಮೀಣರ ನಂಬಿಕೆ ಪ್ರಕಾರ ಮೃಗಶಿರಾ ಮಳೆ ಉತ್ತಮವಾಗಿ ಸುರಿಯಬೇಕು. ಈ ಸಂದರ್ಭದಲ್ಲಿ ನದಿ, ಹಳ್ಳ, ಕೊಳ್ಳಗಳಲ್ಲಿ ನೀರು ತುಂಬಿಕೊಳ್ಳಲಾರಂಭಿಸುತ್ತದೆ. ನಂತರ ಬರುವ ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷ ಮಳೆಗಳು ಮತ್ತಷ್ಟು ರಭಸ ಹೆಚ್ಚಿಸಿಕೊಂಡು ನದಿಗಳು ಮೈದುಂಬುವಂತೆ ಮಾಡುತ್ತದಲ್ಲದೆ ಜಲಮೂಲಗಳಿಗೆ ಜೀವ ಕೊಡುತ್ತದೆ. ಭತ್ತ ಸೇರಿದಂತೆ ಕೃಷಿ ಚುಟವಟಿಕೆಗಳಿಗೆ ಆಸರೆಯಾಗುತ್ತದೆ. ಆದರೆ ಈ ಬಾರಿ ಆ ಯಾವ ಲಕ್ಷಣಗಳೂ ಸದ್ಯಕ್ಕೆ ಕಾಣುತ್ತಿಲ್ಲ.

ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲೇ ಅಬ್ಬರಿಸುತ್ತಿದ್ದ ಮಳೆರಾಯ ಜೂನ್ ಕೊನೆಯ ವಾರ ಬಂದರೂ ಸದ್ದು ಮಾಡುತ್ತಿಲ್ಲ. ಜೀವನದಿ ಕಾವೇರಿ ಜಲಾನಯನ ಪ್ರದೇಶದಲ್ಲೂ ವಾಡಿಕೆಗಿಂತ ಕಡಿಮೆ ಮಳೆ ಬಂದಿದೆ. ಹೆಚ್ಚು ಮಳೆ ಸುರಿಯುವ ಕಾವೇರಿ ಜನ್ಮ ಸ್ಥಾನ ತಲಕಾವೇರಿ, ಭಾಗಮಂಡಲ, ನಾಪೋಕ್ಲು, ಪಾಡಿ, ಕಕ್ಕಬ್ಬೆ ವ್ಯಾಪ್ತಿಯಲ್ಲಿ ವರ್ಷಂಪ್ರತಿ ಬರುವಂತೆ ಮಳೆ ಸುರಿಯುತ್ತಿಲ್ಲ. ಇದರಿಂದಾಗಿ ಕಾವೇರಿ, ಲಕ್ಷ್ಮಣತೀರ್ಥ ಸೇರಿದಂತೆ ಜಿಲ್ಲೆಯ ಪ್ರಮುಖ ನದಿಗಳು ಬಡವಾಗಿ ಹರಿಯುತ್ತಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಪಟ್ಟಣವಾಗಿರುವ ಕುಶಾಲನಗರ ಒಳಗೊಂಡಂತೆ ನದಿಪಾತ್ರದ ಚಿಕ್ಕ ಮತ್ತು ದೊಡ್ಡ ಊರುಗಳಿಗೆ ಕಾವೇರಿ ನದಿಯಿಂದಲೇ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಮಳೆಯ ಸ್ಥಿತಿ ಹೀಗೆಯೇ ಇನ್ನು ೧೯ ದಿನ ಮುಂದುವರಿದರೆ ಜೀವಜಲಕ್ಕಾಗಿ ಪರದಾಡುವ ಸ್ಥಿತಿ ಎದುರಾಗುವ ಆತಂಕ ಕಂಡು ಬರುತ್ತಿದೆ.

ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿಯ ಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ೮.೫ ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಕಳೆದ ವರ್ಷ ಬಳಕೆಗೆ ಯೋಗ್ಯವಾದ ೫.೫೭೪ ಟಿಎಂಸಿ ನೀರು ಕಳೆದ ವರ್ಷ ಜೂ. ೧೯ರಂದು ಇತ್ತು. ಆದರೆ ಸೋಮವಾರದ (ಜೂ.೧೯) ಮಾಹಿತಿ ಪ್ರಕಾರ ಇಲ್ಲಿರುವುದು ಕೇವಲ ೧.೮೩೪ ಟಿಎಂಸಿ ನೀರು ಮಾತ್ರ. ೨೮೫೯ ಅಡಿ ಎತ್ತರದ ಅಣೆಕಟ್ಟೆಯಲ್ಲಿ ಪ್ರಸ್ತುತ ೨೮೧೯.೦೫ ಟಿಎಂಸಿ ನೀರಿದ್ದರೆ, ಕಳೆದ ವರ್ಷ ಇದೇ ದಿನ ೨೮೫೧.೮೩ ಅಡಿಗಳಷ್ಟು ನೀರಿತ್ತು. ಅಂದರೆ ಅಣೆಕಟ್ಟೆ ಭರ್ತಿಗೆ ಕೇವಲ ೭ ಅಡಿಗಳಷ್ಟೇ ಬಾಕಿ ಇತ್ತು. ಈಗ ಅಣೆಕಟ್ಟೆಗೆ ೧೧೬ ಕ್ಯುಸೆಕ್ ನೀರಿನ ಒಳಹರಿವು ಇದ್ದರೆ, ಕಳೆದ ವರ್ಷ ಇದೇ ದಿನ ೫೮೪ ಕ್ಯುಸೆಕ್ ನೀರು ಹರಿದುಬರುತ್ತಿತ್ತು.

ಹಾರಂಗಿ ಜಲಾಶಯ ತುಂಬಿದ ನಂತರ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಹರಿಸಲಾಗುತ್ತದೆ. ಹಾಗಾಗಿ ಮಂಡ್ಯದ ಕೆಆರ್‌ಎಸ್ ಭರ್ತಿ ಆಗುವಲ್ಲಿ ಕೊಡಗಿನ ಹಾರಂಗಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ವೇಳೆ ಮಳೆಯಾಗದೆ ಹಾರಂಗಿ ತುಂಬದಿದ್ದರೆ ಕೊಡಗು, ಮಂಡ್ಯ ಮಾತ್ರವಲ್ಲದೆ ಪಕ್ಕದ ಹಾಸನ, ಮೈಸೂರು ಜಿಲ್ಲೆಗಳ ಕೃಷಿ ಚಟುವಟಿಕೆಗಳಿಗೂ ಸಮಸ್ಯೆ ಆಗುತ್ತದೆ. ಹಾರಂಗಿ ಜಲಾಶಯದಿಂದ ಕೊಡಗಿನ ಕುಶಾಲನಗರ, ಸೋಮವಾರಪೇಟೆ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಒಟ್ಟು ೧,೩೪,೮೯೫ ಎಕರೆ ಪ್ರದೇಶಕ್ಕೆ ನೀರು ಪೂರೈಸಲಾಗುತ್ತದೆ. ಜಲಾಶಯದ ನೀರು ಬಳಸಿಕೊಂಡು ’ಎನರ್ಜಿ ಡೆವಲಪ್‌ಮೆಂಟ್ ಕಂಪೆನಿ’ (ಇ.ಡಿ.ಸಿ.ಎಲ್) ಇಲ್ಲಿ ವಿದ್ಯುತ್ ಕೂಡ ತಯಾರಿಸುತ್ತಿದೆ.

ಗೋಣಿಕೊಪ್ಪದ ಜಿಲ್ಲಾ ಕೃಷಿ ಹವಾಮಾನ ಘಟಕದ ಮಾಹಿತಿ ಪ್ರಕಾರ ಈ ವರ್ಷ ಮಡಿಕೇರಿ ತಾಲೂಕಿನಲ್ಲಿ ಜೂ.೧೮ರ ತನಕ ೨೫೧.೮ ಮಿಮೀ ಮಳೆಯಾಗಿದೆ. ಕಳೆದ ವರ್ಷ ೫೯೮.೫ ಮಿ.ಮೀ. ಮಳೆಯಾಗಿತ್ತು. ಕಳೆದ ವರ್ಷ ವಾಡಿಕೆಗಿಂತ ಶೇ. ೧೪ರಷ್ಟು ಹೆಚ್ಚು ಮಳೆಯಾಗಿದ್ದರೆ ಈ ವರ್ಷ ಶೇ. ೫೨ರಷ್ಟು ಕಡಿಮೆ ಮಳೆ ಬಂದಿದೆ. ಪ್ರಸ್ತುತ ಸೋಮವಾರಪೇಟೆ ತಾಲೂಕಿನಲ್ಲಿ ೨೦೦.೪ ಮಿ.ಮೀ. ಮಳೆಯಾಗಿದ್ದರೆ ಕಳೆದ ವರ್ಷ ೩೯೫.೭ಮಿ.ಮೀ. ಮಳೆ ಸುರಿದಿತ್ತು. ಈ ವರ್ಷ ವಾಡಿಕೆಗಿಂತ ಶೇ. ೪೨ರಷ್ಟು ಕಡಿಮೆ ಮಳೆ ಬಂದರೆ ಕಳೆದ ವರ್ಷ ವಾಡಿಕೆಗಿಂತ ಶೇ.೧೪ರಷ್ಟು ಹೆಚ್ಚು ಮಳೆಯಾಗಿತ್ತು. ವಿರಾಜಪೇಟೆ ತಾಲೂಕಿನಲ್ಲಿ ಈ ಬಾರಿ ೧೭೮.೩ ಮಿ.ಮೀ. ಮಳೆ ಬಂದಿದ್ದು. ಕಳೆದ ವರ್ಷ ೪೨೩.೧ ಮಿ.ಮೀ. ಮಳೆ ದಾಖಲಾಗಿತ್ತು. ಕಳೆದ ವರ್ಷ ವಾಡಿಕೆಗಿಂತ ಶೇ. ೨೧ರಷ್ಟು ಕಡಿಮೆ ಮಳೆಯಾಗಿದ್ದರೆ, ಈ ವರ್ಷ ವಾಡಿಕೆಗಿಂತ ಶೇ ೬೭ರಷ್ಟು ಕಡಿಮೆ ಮಳೆಯಾಗಿದೆ.

ಮಳೆಯಿಲ್ಲದೆ ಕಾಡಿನೊಳಗೆ ನೀರಿನ ಒರತೆ ಬತ್ತುತ್ತಿದ್ದಂತೆಯೇ ವನ್ಯ ಪ್ರಾಣಿಗಳು ಜನವಸತಿ ಪ್ರದೇಶದ ಕಡೆಗೆ ನುಗ್ಗಲಾರಂಭಿಸಿದೆ. ಕುಡಿಯುವ ನೀರು ಮತ್ತು ಆಹಾರ ಅರಸಿಕೊಂಡು ಇತ್ತೀಚಿನ ದಿನಗಳಲ್ಲಿ ಕಾಡಾನೆ ಸೇರಿದಂತೆ ಕಾಡು ಪ್ರಾಣಿಗಳು ಹಳ್ಳಿಗಳಿಗೆ ಬರುತ್ತಿದೆ. ಇದರಿಂದ ಜನರ ಪ್ರಾಣಕ್ಕೆ ಅಪಾಯ ಮಾತ್ರವಲ್ಲದೆ ಕೃಷಿ ಭೂಮಿಗೂ ನಷ್ಟ ಉಂಟಾಗುತ್ತಿದೆ. ಒಂದು ವೇಳೆ ಮಳೆ ಬಾರದಿದ್ದಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಇದೆ. ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಮಳೆ ನಂಬಿ ಮುಸುಕಿನ ಜೋಳ ಬಿತ್ತನೆ ಮಾಡಿರುವವರು ಆಕಾಶ ನೋಡುತ್ತಾ ಕೂರುವಂತಾಗಿದೆ. ಕಾಫಿ, ಕರಿಮೆಣಸಿಗೂ ಅಗತ್ಯ ಪ್ರಮಾಣದಲ್ಲಿ ಮಳೆ ಬೇಕಾಗಿದ್ದು, ಈ ವರ್ಷ ಫಸಲು ನಷ್ಟದ ಭೀತಿಯಲ್ಲಿ ಬೆಳೆಗಾರರು ಇದ್ದಾರೆ. ಭತ್ತದ ಬಿತ್ತನೆ ಸಿದ್ಧತಾ ಕಾರ್ಯಕ್ಕೂ ಮುಂಗಾರು ಕೊರತೆಯಿಂದ ಹಿನ್ನಡೆ ಆಗಿದೆ.

ಮುಂಗಾರು ಪ್ರವೇಶಿಸಿದ್ದರೂ ಚಂಡಮಾರುತದ ಕಾರಣದಿಂದ ಮಳೆ ಆಗಿಲ್ಲ. ಈಗ ಚಂಡಮಾರುತದ ಪ್ರಭಾವ ನಿಧಾನಕ್ಕೆ ಕಡಿಮೆ ಆಗುತ್ತಿದ್ದು, ಹೊಸದಾಗಿ ಮೋಡಗಳು ಕಟ್ಟಬೇಕಿದೆ. ಸೋಮವಾರದಿಂದ ಮಳೆ ಶುರುವಾಗುವುದಾಗಿ ಹವಾಮಾನ ಇಲಾಖೆಯ ಈ ಮೊದಲಿನ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಆದರೆ ಅದು ಮತ್ತೆ ಮುಂದಕ್ಕೆ ಹೋಗಿದೆ. ಬಹುಶಃ ಜೂ. ೨೨ರ ನಂತರ ಮಳೆ ಜೋರಾಗುವ ಎಲ್ಲಾ ಸಾಧ್ಯತೆಗಳಿವೆ. ನಾವು ಕೂಡ ಇದೇ ನಿರೀಕ್ಷೆಯಲ್ಲಿ ಇದ್ದೇವೆ.
ಎಸ್.ಕೆ. ಚಂಗಪ್ಪ, ಹವಾಮಾನ ಪರಿವೀಕ್ಷಕ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net